ಮೈಸೂರು : ಯದುವೀರ್ ಜನರ ವಿಶ್ವಾಸದ ಅಲೆಯಿಂದ ಗೆದ್ದಿದ್ದಾರೆಯೇ ಹೊರತು, ಬೇರೆ ಯಾವುದೇ ಅಲೆಯಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನೂತನ ಸಂಸದ ಯದುವೀರ್ ಕುರಿತಂತೆ ಜನತೆಗೆ ಸಾಕಷ್ಟು ಆಕಾಂಕ್ಷೆಗಳಿವೆ. ಮೈಸೂರಿನ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ. ವಿಶ್ವವಿಖ್ಯಾತ ದಸರಾ ಈಗ ಕುಸಿದಿದೆ. ಜಗತ್ತಿನ ಜನ ಮತ್ತೆ ಇಲ್ಲಿಗೆ ಬರುವಂತೆ ಮಾಡಬೇಕು. ಇದರಿಂದ ಜನರ ಹೊಟ್ಟೆ ತುಂಬುತ್ತದೆ. ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ. ನೆಲ, ಜಲ, ವಿದ್ಯುತ್ ಸೇರಿದಂತೆ ಎಲ್ಲದರ ಬಗ್ಗೆ ಗಮನಿಸಿ ಎಂದು ಹೇಳಿದರು.
ಕೇಂದ್ರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ : ರಾಜ್ಯದಿಂದ ಆಯ್ಕೆಯಾಗಿರುವ ನೂತನ ಸಂಸದರು, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಲಿ ಎಂದು ಸಲಹೆ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿದ್ದವರು ಇಲ್ಲಿನ ನಾಡು-ನುಡಿ, ಜಲ, ಅಭಿವೃದ್ಧಿ ವಿಷಯ ಕುರಿತಂತೆ ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಿಲ್ಲ. ಆದರೆ ಈಗ ಆಯ್ಕೆಯಾಗಿರುವವರು ಇದಕ್ಕೆ ಹೊರತಾಗಿ ಕೆಲಸ ಮಾಡಿ. ರಾಜ್ಯದ ಹಿತ ಕಾಯುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ರಾಜ್ಯದಿಂದ ಆಯ್ಕೆಯಾಗಿರುವ 28 ಮಂದಿಯೂ ಪಕ್ಷಾತೀತವಾಗಿ ರಾಜ್ಯದ ಸಮಸ್ಯೆಗಳನ್ನು ಕೇಂದ್ರದಲ್ಲಿ ತಿಳಿಸಿ ಪರಿಹಾರ ಪಡೆದುಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಬಾರಿ ಮೂವರು ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಲಿ, ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಲಿ ಎಂದು ವಿಶ್ವನಾಥ್ ಒತ್ತಾಯಿಸಿದರು.
ಅಯೋಧ್ಯೆಯ ರಾಮನ ಹೆಸರಿನಲ್ಲಿ ಚುನಾವಣೆ ಮಾಡಲು ಸಾಧ್ಯವಿಲ್ಲ ಎಂದು ಜನರು ಈ ಚುನಾವಣೆಯಲ್ಲಿ ಎಚ್ಚರಿಸಿದ್ದಾರೆ. ಚುನಾವಣೆಗೂ ಮುನ್ನ ಏನೆಲ್ಲ ಮಾತುಗಳನ್ನು ಆಡಿದವರಿದ್ದಾರೆ. ಧರ್ಮ, ರಾಮ ಎಂದರು. ಆದರೆ ಜನ ಅದನ್ನು ಒಪ್ಪುವುದಿಲ್ಲ ಎಂಬುದು ಸ್ವತಃ ಅಯೋಧ್ಯೆಯ ಫಲಿತಾಂಶದಿಂದಲೇ ಸಾಬೀತಾಗಿದೆ. ಜನರಿಗೆ ಅಭಿವೃದ್ಧಿ ಕೆಲಸಗಳು ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಹಾತ್ಮಗಾಂಧಿ ಬಗ್ಗೆ ಹಗುರವಾಗಿ ಮಾತನಾಡಬಾರದು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾತ್ಮಗಾಂಧಿ ಬಗ್ಗೆ ಹಗುರವಾಗಿ ಮಾತನಾಡಬಾರದು. ಮನಸ್ಸನ್ನು ಒಡೆಯುವ, ಧರ್ಮ ಧರ್ಮಗಳನ್ನು ಒಡೆಯುವ ರೀತಿಯ ಮಾತು ಬೇಡ. ಮಹಾತ್ಮ ಗಾಂಧೀಜಿ ಅವರ ಹೋರಾಟ ಮತ್ತು ಸಿದ್ಧಾಂತ ಏನೆಂಬುದು ಜಗತ್ತಿಗೆ ಗೊತ್ತು ಎಂದು ಹೆಚ್ ವಿಶ್ವನಾಥ್ ತಿಳಿಸಿದರು.
ಯದುವಂಶದವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್‌ನಿಂದ ಯಾರನ್ನೂ ಕಣಕ್ಕಿಳಿಸದಂತೆ ಮನವಿ ಮಾಡಿದ್ದೆ. ಆದರೆ ಅವರು ಕೇಳಲಿಲ್ಲ. ಜಾತಿ ಮೊದಲಾದ ಲೆಕ್ಕಾಚಾರ ಹಾಕಿದರು. ಆದರೆ ಚುನಾವಣೆ ಫಲಿತಾಂಶ ಏನಾಯಿತು? ಎಂದು ಕೇಳಿದರು.
ಮಹಾರಾಜರಿಗೆ ಯಾವುದೇ ಪಕ್ಷ, ಜಾತಿ ಧರ್ಮದ ಅಡ್ಡಿ ಇಲ್ಲ. ಅವರನ್ನು ಈಗ 1.5 ಲಕ್ಷ ಮತಗಳ ಅಂತರದಿಂದ ಮತದಾರರು ಗೆಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು 12 ದಿನ ಕ್ಯಾಂಪ್ ಹಾಕಿ ಮಲಗಿದ್ದರು. ಅದರಿಂದ ಏನಾಯಿತು?. ಅವರ ದುರಹಂಕಾರದಿಂದ ಏನೂ ಆಗುವುದಿಲ್ಲ. ಈ ಬಾರಿ ಕಾಂಗ್ರೆಸ್ ಒಂಬತ್ತು ಸ್ಥಾನ ಗಳಿಸಿದ್ದರೂ, ಇದರಲ್ಲಿ ಮಂತ್ರಿಗಳ ಮಕ್ಕಳು ಸೇರಿದ್ದಾರೆ. ಹೀಗಾಗಿ ಸರ್ಕಾರದ ನಡವಳಿಕೆಯನ್ನು ನೋಡುತ್ತಾರೆ. ಜನರಿಗೆ ಏಕವಚನದಲ್ಲಿ ಮಾತನಾಡುವುದನ್ನು ಸಿಎಂ ನಿಲ್ಲಿಸಬೇಕು ಎಂಬ ಎಚ್ಚರಿಕೆಯನ್ನು ಬಿಜೆಪಿ ಎಂಎಲ್ಸಿ ರವಾನಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರು ಹಾಸನದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಕುರಿತಂತೆ ಕೇಳಿದ ಪ್ರಶ್ನೆಗೆ, ‘ಯಾರ್ರಿ ಅವನು ಗಿರಾಕಿ, ಈಗ ಅವನ ಬಗ್ಗೆ ಮಾತು ಬೇಡ, ದೇಶದ ಬಗ್ಗೆ ಯೋಚಿಸಿ ಎಂದಷ್ಟೇ ಹೇಳಿದರು. ಮಾಧ್ಯಮಗೋಷ್ಟಿಯಲ್ಲಿ ಎ. ಎಸ್ ಚನ್ನಬಸಪ್ಪ ಇದ್ದರು.
ಇದನ್ನೂ ಓದಿ : ನರೇಂದ್ರ ಮೋದಿಯವರೇ ಪ್ರಧಾನಿ ಆಗ್ತಾರೆ: ಯದುವೀರ್ - Yaduveer Wadiyar