ಮೈಸೂರು : ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದ ಮಾತ್ರಕ್ಕೆ ಸಿದ್ದರಾಮಯ್ಯ ತಮ್ಮ ಮೇಲಿನ ಆಪಾದನೆಗಳಿಂದ ದೂರ ಆಗಲ್ಲ, ಮುಡಾ, ವಾಲ್ಮೀಕಿ ಹಗರಣಕ್ಕೆ ಇದು ಉತ್ತರವಲ್ಲ. ಹಾಗಾಗಿ, ನಾವು ಗೆದ್ದಿದ್ದೇವೆ ಎಂದು ಯಾರೂ ಬೀಗಬೇಕಿಲ್ಲ ಎಂದು ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯತ್ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಮೂರಕ್ಕೆ ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಗೆದ್ದವರಿಗೆ ಶುಭಾಶಯಗಳು. ಉಪಚುನಾವಣೆಗಳು ಯಾವತ್ತೂ ಕೂಡಾ ಶಿಫಾರಸಿನ ಮೇಲೆ, ದುಡ್ಡಿನ ಮೇಲೆ, ಜಾತಿಯ ಮೇಲೆ ಹಾಗೂ ಅಧಿಕಾರದ ಆಶಯದ ಮೇಲೆ ನಡೆಯುತ್ತದೆಯೇ ಹೊರತು, ಯಾವುದೇ ತತ್ವ - ಸಿದ್ದಾಂತ ಕಾರ್ಯಕ್ರಮಗಳ ಮೇಲೆ ನಡೆಯಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ಚೆನ್ನಾಗಿದೆ ಎಂದು ಜನರು ಕೊಟ್ಟ ಅಂಕವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲ. ಇದು ದುಡ್ಡಿಗೆ ಕೊಟ್ಟ ಅಂಕ ಎಂದಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ಹಗರಣ ಉಪಚುನಾವಣೆಯ ಮೇಲೆ ವರ್ಕ್ ಆಗಿಲ್ಲವೇ? ಎಂಬ ಪ್ರಶ್ನೆಗೆ, ಮುಡಾ ಹಗರಣ ಮೈಸೂರಿನಲ್ಲಿ ಆಗಿದೆ. ಮೈಸೂರಿನಲ್ಲಿ ಯಾವುದಾದರೂ ಉಪಚುನಾವಣೆ ಆಗಿದ್ರೆ ಅದು ಆಗ್ತಾ ಇತ್ತು. ಶಿಗ್ಗಾಂವಿ, ಸಂಡೂರು ದೂರದಲ್ಲಿವೆ. ಎಲ್ಲವೂ ಸರಿ ಇದೆ ಎಂದು ಹೇಳಿ ಕೊಟ್ಟಂತಹ ಮತ ಇದಲ್ಲ ಎಂದು ಹೇಳಿದ್ದಾರೆ.
ಬೈ ಎಲೆಕ್ಷನ್ ಹೇಗೆ ಇರುತ್ತವೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಒಂದೊಂದು ಕ್ಷೇತ್ರಗಳಿಗೂ ಹತ್ತತ್ತು ಮಂತ್ರಿಗಳನ್ನ ನೇಮಿಸಿದ್ರಿ. ಕೋಟ್ಯಂತರ ರೂ ದುಡ್ಡು ಕೊಟ್ರಿ. ಸೀರೆ, ಹಣ, ಹೆಂಡ ಇವು ಇದ್ದೇ ಇರುತ್ತವೆ. ಸಿದ್ದರಾಮಯ್ಯನ ಕಾಲದಲ್ಲಿ ಅಂತ ಅಲ್ಲ, ಎಲ್ಲರ ಕಾಲದಲ್ಲಿಯೂ ಇವು ಇವೆ ಎಂದರು.
ನಿಖಿಲ್ ಕುಮಾರ ಸ್ವಾಮಿಗೆ 3ನೇ ಬಾರಿ ಸೋಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏನು ಮಾಡುವುದಕ್ಕೆ ಆಗುವುದಿಲ್ಲ. ವೋಟ್ ಹಾಕುವುದು ಜನ, ಜನಾದೇಶಕ್ಕೆ ತಲೆ ಬಾಗಲೇಬೇಕು ಎಂದು ಹೇಳಿದರು.
ಜನರ ತೀರ್ಪನ್ನು ಗೌರವಿಸಬೇಕು - ಯದುವೀರ್ : ಎನ್ಡಿಎ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇತ್ತು. ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಅಂತಿಮವಾಗಿ ಜನರ ತೀರ್ಪನ್ನು ಗೌರವಿಸಬೇಕು ಎಂದು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಹಿನ್ನೆಲೆ ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಮೂರು ಕ್ಷೇತ್ರಗಳಲ್ಲಿ ಗೆಲುವು ಆಗಿದೆ. ಚನ್ನಪಟ್ಟಣದಲ್ಲಿ ನಾವು ಸಹ ಪ್ರಚಾರ ಮಾಡಿದ್ದೇವೆ. ಅಲ್ಲಿ ಜನರಿಗೆ ನಮ್ಮ ಪರ ಒಲವು ಇತ್ತು. ಆದರೆ ಫಲಿತಾಂಶ ಬೇರೆಯಾಗಿದೆ. ನಾವು ಕೂಡ ಸೋಲಿನ ಅವಲೋಕನ ಮಾಡಬೇಕಿದೆ ಎಂದು ಹೇಳಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸಭೆ : ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸಭೆ ಮಾಡಿದ್ದೇವೆ. ಬೃಹತ್ ಮಹಾನಗರ ಪಾಲಿಕೆ ಮಾಡಲು ಒಳ್ಳೆಯ ರೀತಿಯಲ್ಲಿ ಚರ್ಚೆ ನಡೆದಿದೆ. ಅನೇಕ ಸಂಘ -ಸಂಸ್ಥೆಗಳು, ಹಿರಿಯರು ಮತ್ತು ನಾಗರಿಕರು ತಮ್ಮ ಸಲಹೆಗಳನ್ನು ನೀಡಿದ್ದಾರೆ. ಎಲ್ಲಾ ಸಲಹೆಗಳನ್ನು ಸ್ವೀಕರಿಸಿದ್ದೇವೆ ಎಂದರು.
ಇದನ್ನೂ ಓದಿ : ನನ್ನನ್ನು ಯಾರೂ ಪ್ರಚಾರಕ್ಕೆ ಕರೆದಿಲ್ಲ, ನಿಖಿಲ್ 3ನೇ ಸೋಲನ್ನು ಧೈರ್ಯವಾಗಿ ಎದುರಿಸಬೇಕು: ಜಿ.ಟಿ.ದೇವೇಗೌಡ