ಮೈಸೂರು: ಉದಯಗಿರಿ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾನೂನಿನ ಮೇಲೆ ಯಾರಿಗೋ ಭಯ ಇಲ್ಲದಂತಾಗಿದೆ. ಅಪರಾಧ ಹೆಚ್ಚಾಗುತ್ತಿವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
''ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ಈ ಸರ್ಕಾರವನ್ನು ರಾಜ್ಯದ ಜನರು ಆಯ್ಕೆ ಮಾಡಿದ್ದಾರೆ. ಎಲ್ಲದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು'' ಎಂದು ಹರಿಹಾಯ್ದರು.
ವಿಶ್ವವಿದ್ಯಾಲಯ ಮುಚ್ಚುವ ನಿಲುವು ಸ್ವಾಗತಾರ್ಹ: ''ರಾಜ್ಯದ ಹಲವು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ರೂ. ಕೊಡುತ್ತಿದ್ದರು. ಅದು ಈಗಲೂ ಮುಂದುವರೆದಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಹಲವು ವಿವಿಗಳನ್ನು ಬಂದ್ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಸರಿಯಾಗಿದೆ'' ಎಂದರು.
ರಾಜ್ಯ ಸರ್ಕಾರ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ, ''ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕಾಂಗಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬಜೆಟ್ ಕುರಿತು ಶಾಸಕಾಂಗ ಒಪ್ಪಿಗೆ ನೀಡುತ್ತದೆ. ಆದರೆ, ಸರ್ಕಾರ ಶಾಸಕಾಂಗ ಒಪ್ಪಿಗೆ ನೀಡಿದ ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಏನು ಮಾಡಿದೆ?. ಕಳೆದ ಬಾರಿಯ ಬಜೆಟ್ ಏನಾಯಿತು'' ಎಂದು ಪ್ರಶ್ನಿಸಿದರು.
ಕುಂಭಮೇಳದ ವ್ಯವಸ್ಥೆ ಚೆನ್ನಾಗಿದೆ: ''ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶ ಸರ್ಕಾರ ಮಾಡಿರುವ ವ್ಯವಸ್ಥೆ ಅತ್ಯುತ್ತಮವಾಗಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ, ಇಡೀ ಕುಂಭಮೇಳದ ವ್ಯವಸ್ಥೆ ಚೆನ್ನಾಗಿದೆ. ಒಂದು ಮನೆ ನಡೆಸುವುದೇ ಕಷ್ಟ. ಕೋಟ್ಯಂತರ ಜನರು ಭಾಗಿಯಾಗಿರುವ ಕುಂಭಮೇಳ ಯಶಸ್ವಿಯಾಗಿ ನಡೆದಿದೆ'' ಎಂದರು.
ಇದನ್ನೂ ಓದಿ: ಡಿಕೆಶಿ, ರಾಜಣ್ಣ ಮಧ್ಯದ ಹೇಳಿಕೆ ವಿಚಾರ: ಪಕ್ಷದ ತೀರ್ಮಾನವೇ ಅಂತಿಮ ಎಂದ ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಹಾಗೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗದ ವಿಚಾರವಾಗಿ ಮಾತನಾಡಿ, ''ನಮ್ಮ ಹೆಂಡತಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಅಂತ ಗಂಡಂದಿರು ಹೇಳುತ್ತಿದ್ದಾರೆ. ಇದರಿಂದ ಮನೆಗಳು ಮುರಿದು ಹೋಗುವ ಪರಿಸ್ಥಿತಿ ಬಂದಿದೆ'' ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿ ಅನುಷ್ಠಾನ ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ