ಮೈಸೂರು: ಸಿಎಂ ಸಿದ್ದರಾಮಯ್ಯ ಯಾರಿಗೂ ಬಗ್ಗುವುದು, ಜಗ್ಗುವುದು ಬೇಡ. ಮೊದಲು ಕಾನೂನಿಗೆ ತಲೆಬಾಗಬೇಕು. ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ರಂಪ ಮಾಡಿಕೊಳ್ಳುವುದು ಬೇಡ. ಜನ ಅಧಿಕಾರ ಕೊಟ್ಟಿದ್ದಾರೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈಗ ರಾಜೀನಾಮೆ ನೀಡಿವುದು ಉತ್ತಮ( it is better to resign and get out) ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಯಾವಾಗಲು ಹೇಳುತ್ತಾರೆ. ಕಾನೂನು ತನ್ನ ಪಾಡಿಗೆ ಕೆಲಸ ಮಾಡುತ್ತದೆ ಎಂದು. ಅದೇ ರೀತಿ ಈಗ ಕೆಲಸ ಮಾಡಿದೆ. ಮೊದಲೇ ನಾನು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆ. ದಯವಿಟ್ಟು ಸೈಟ್ ವಾಪಸ್ ಕೊಡಿ. 14 ಸೈಟ್ ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ಮಾಮೂಲಿ. ಎಲ್ಲಾ ಪಕ್ಷದವರು ಇದನ್ನೇ ಹೇಳುತ್ತಾರೆ. ಆದರೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಯಾವಾಗಲೂ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ. ಅದನ್ನು ಬಿಟ್ಟು ಹಠ ಮಾಡಬಾರದು. ಇಲ್ಲಿಯ ಕಾನೂನು ಹಾಗೂ ಜನರಿಗೆ ತಲೆಬಾಗಿ ತನಿಖೆ ಎದುರಿಸಬೇಕು ಎಂದು ಹೆಚ್ ವಿಶ್ವನಾಥ್ ಒತ್ತಾಯಿಸಿದರು.