ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಬಿಜೆಪಿ ನೀಡಿರುವ ಶೋಕಾಸ್ ನೋಟಿಸ್‌ಗೆ ಖುದ್ದು ಉತ್ತರಿಸಲು ಭಿನ್ನರ ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಯತ್ನಾಳ್ ಜೊತೆಗೆ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಶಾಸಕ ಬಿ.ಪಿ ಹರೀಶ್ ಮತ್ತು ಕುಮಾರ್ ಬಂಗಾರಪ್ಪ ಸೇರಿದಂತೆ ಕೆಲವು ನಾಯಕರು ತೆರಳಿದ್ದಾರೆ.
ನಾಳೆ ಬೆಳಗ್ಗೆ 11:30ಕ್ಕೆ ವರಿಷ್ಠರು ಭೇಟಿಗೆ ಸಮಯ ನೀಡಿರುವುದಾಗಿ ರಮೇಶ್ ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು. ಒಂದು ವೇಳೆ ಭೇಟಿ ಸಾಧ್ಯವಾಗದಿದ್ದರೆ, ಮುಂದೊಂದು ದಿನ ಬರುವುದಾಗಿಯೂ ಹೇಳಿದ್ದಾರೆ. ಬಿಜೆಪಿ ಶಿಸ್ತು ಸಮಿತಿ ಮುಂದೆ ನಮ್ಮ ಅಹವಾಲುಗಳನ್ನು ಮಂಡಿಸಲಿದ್ದು, ನಮ್ಮ ತಪ್ಪಿದ್ದರೆ ತಿದ್ದಿಕೊಳ್ಳಲು ಸಿದ್ಧವಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದರು.
ಈ ಮಧ್ಯೆ ನೋಟಿಸ್ ತಲುಪಿದ ಹತ್ತು ದಿನದೊಳಗೆ ಉತ್ತರ ನೀಡುವಂತೆ ಗಡುವು ನೀಡಲಾಗಿದ್ದು, ಹಿಂದಿನ ಎಚ್ಚರಿಕೆಗಳಿಂದ ಸರಿಪಡಿಸಿಕೊಳ್ಳದೆ, ಪಕ್ಷದ ರಾಜ್ಯ ನಾಯಕರ ವಿರುದ್ಧ ಮಾತು ಮುಂದುವರೆಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವರಿಷ್ಠರ ನೋಟಿಸ್‌ಗೆ ನಿನ್ನೆಯೇ ಯತ್ನಾಳ್ ಎರಡು ಪ್ರತ್ಯೇಕ ಟ್ವೀಟ್ ಮಾಡಿ ನನಗೆ ಇದುವರೆಗೂ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ, ವಾಟ್ಸ್ಆ್ಯಪ್ನಲ್ಲಿ ಬಂದಿದೆ ಎಂದಿದ್ದರು. ಆದರೆ, ಇಂದು ಸ್ವಯಂ ದೆಹಲಿಯಲ್ಲಿದ್ದು, ನೋಟಿಸ್‌ಗೆ ಉತ್ತರಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯತ್ನಾಳ್ ನೇತೃತ್ವದ ಭಿನ್ನರ ತಂಡ ದೆಹಲಿಯಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದು, ಶಿಸ್ತು ಸಮಿತಿ ಮುಂದೆ ಏನು ಹೇಳಬೇಕು ಎಂಬ ತಯಾರಿ ನಡೆಸಿದೆ. ಏನೇ ಆದರೂ, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೇಬೇಕು ಎಂಬುದು ಈ ತಂಡದ ಹಠವಾಗಿದೆ.
ವಿಜಯೇಂದ್ರ ಪರವಾಗಿ ಕೆಲವು ನಾಯಕರು ಮಾತ್ರ ಇದ್ದು, ಉಳಿದವರು ನಮ್ಮೊಂದಿಗಿದ್ದಾರೆ ಎಂದು ಯತ್ನಾಳ್ ಪರ ತಂಡ ವಾದ ಮಾಡುತ್ತಿದೆ. ಯತ್ನಾಳ್ ತಮ್ಮ ಟ್ವೀಟ್‌ನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಕಲಿ ನೋಟಿಸ್ ಸೃಷ್ಟಿಸಿದ್ದಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ, ಯತ್ನಾಳ್ ಬಗ್ಗೆ ವರಿಷ್ಠರು ತೀರ್ಮಾನಿಸ್ತಾರೆ: ವಿಜಯೇಂದ್ರ