ಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಕೇವಲ ಮುಡಾ ಹಗರಣ ಮಾತ್ರ ಚರ್ಚೆಯಾಗುತ್ತಿಲ್ಲ. ಮುಡಾ ಹಗರಣದ ಜೊತೆಗೆ ಕುಮಾರಸ್ವಾಮಿ, ಯಡಿಯೂರಪ್ಪ ಅವರ ವಿಷಯವೂ ಚರ್ಚೆ ನಡೆಯುತ್ತಿದೆ ಎಂದು ಯಲ್ಲಾಪುರ ಕ್ಷೇತ್ರದ ಬಿಜೆಪಿಯ ರೆಬೆಲ್ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಶಿರಸಿ ತಾಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಭಾನುವಾರ ಶ್ರೀಗಳ ಆಶೀರ್ವಾದ ಪಡೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಸಚಿವರ ಹಗರಣದ ಬಗ್ಗೆಯೂ ಚರ್ಚೆಯಿದೆ. ಇನ್ನೂ ನಾಲ್ಕು ದಿನದಲ್ಲಿ ಮತ್ತಷ್ಟು ಜನರ ಹಗರಣಗಳು ಮುಡಾ ಹೆಸರಿನಲ್ಲಿ ಹೊರ ಬರಲಿದೆ. ಅದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಹೇಳುವುದಕ್ಕೆ ನ್ಯಾಯಾಲಯವಿದೆ ಎಂದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಬಿಜೆಪಿ ಅಧಿಕಾರದಲ್ಲಿ ಇರಬೇಕು. ರಾಜ್ಯಪಾಲರಾಗಿ ಮುಂದುವರೆಯಬೇಕು ಎಂದಾಗ ಬಿಜೆಪಿ ಹೇಳಿದ ಹಾಗೆ ಕೇಳಬೇಕು. ಇಲ್ಲದೇ ಹೋದಲ್ಲಿ ಅಧಿಕಾರ ಇರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಕುಮಾರಸ್ವಾಮಿ ಕುರಿತು ತನಿಖೆಗೆ ಲೋಕಾಯುಕ್ತ, ಎಸ್ಐಟಿ ಅನುಮತಿ ಕೇಳಿದೆ. ಇದು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಪ್ರತಿಕ್ರಿಯೆ ನೀಡಿದರು.
ಜಿಲ್ಲಾ ಬಿಜೆಪಿಯವರು ನನ್ನನ್ನು ಸಂಪರ್ಕಿಸದೇ ನಾಲ್ಕೈದು ತಿಂಗಳು ಕಳೆದಿದೆ. ಲೋಕಸಭೆ ಚುನಾವಣೆಯ ಮೊದಲಿನಿಂದಲೂ ಸಂಪರ್ಕ ಮಾಡಿಲ್ಲ. ನಾನು ಈಗ ಯಾರ ಜೊತೆಯಲ್ಲಿಯೂ ಇಲ್ಲ. ನಾನು ಸಿಎಲ್ಪಿ, ಬಿಎಲ್ಪಿ ಯಾವುದರಲ್ಲೂ ಇಲ್ಲ. ಕರ್ನಾಟಕ ಲೆಜಿಸ್ಲೆಟಿವ್ ಮೆಂಬರ್ ಆಗಿದ್ದೇನೆ, ನನ್ನ ಬಿಜೆಪಿ ಪಕ್ಷದವರೇ ಈ ಹಿಂದೆ ಸೋಲಿಸಲು ಪ್ರಯತ್ನ ನಡೆಸಿದ್ದರು. ಆದರೆ ಮಾಡಿದ ಕೆಲಸ, ಬಡವರು, ದೇವರು, ಗುರುಗಳ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ : ನಾವು ಬೇಡ ಎಂದ ಮೇಲೆ ನಮಗೇಕೆ ಬಿಜೆಪಿ? ಶಿರಸಿಯಲ್ಲಿ ಶಾಸಕ ಹೆಬ್ಬಾರ್ ಅಸಮಾಧಾನ - Lok Sabha Election 2024