ದಾವಣಗೆರೆ: ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದೌಡಾಯಿಸಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಬಂದ ಕಾರಿನಲ್ಲೇ ತಮ್ಮ ಮನೆಗೆ ವಾಪಸ್ ಆಗಿದ್ದಾರೆ.
ಅವರ ಆರೋಗ್ಯದಲ್ಲಿ ಏರುಪೇರಾಗಿರುವ ವಿಚಾರ ತಿಳಿದು ಕ್ಷಣಾರ್ಧದಲ್ಲಿ ಆಸ್ಪತ್ರೆ ಮುಂದೆ ನೂರಾರು ಜನ ಸೇರಿದ್ದರು. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದ ತಮ್ಮ ಶಾಸಕರನ್ನು ಅಭಿಮಾನಿಗಳು, ಹಿಂಬಾಲಕರು ಕಣ್ತುಂಬಿಕೊಂಡರು.
ಆರೋಗ್ಯದಲ್ಲಿ ಏರುಪೇರಾದ ಶಾಮನೂರು ಅವರಿಗೆ ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಐಸಿಯುನಲ್ಲಿ ಕೆಲ ಹೊತ್ತು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿದಾಗ ಅವರಿಗೆ ಹೃದಯ ಸಂಬಂಧಿ ಹಾಗೂ ಕಫದ ತೊಂದರೆ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೃದಯ ಸಂಬಂಧಿ ಹಾಗೂ ಕಫದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಢೀರ್ ಆಸ್ಪತ್ರೆಗೆ ಆಗಮಿಸಿದ್ದರು. ಉಸಿರಾಟದ ತೊಂದರೆ ಇರುವುದರಿಂದ ಫೇಸ್ ಮೇಕರ್ ಅಳವಡಿಕೆ ಮಾಡಲಾಗಿದೆ. ಇದೀಗ ಆರೋಗ್ಯವಾಗಿದ್ದಾರೆ ಎಂದು ಶಾಮನೂರು ಮನೆಯ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಸಿದ್ದೇಶ್ವರ್ ಹತ್ತಿರ ಇರುವುದು ಕಳ್ಳ ಹಣ: ಶಾಮನೂರು ಶಿವಶಂಕರಪ್ಪ - Shamanuru Shivashankarappa