ಕಾರವಾರ: ಶಾಸಕ ಮುನಿರತ್ನ ಮಾತನಾಡಿರುವ ಮಾತು ಅವರಿಗೆ ಗೌರವ ತರುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾನವನಾಗಿ ಹುಟ್ಟಿದ ನಂತರ ಮಾನವನಾಗಿ ಬಾಳ ಬೇಕು. ಮಾನವನ ಭಾಷೆ ಸರಿಯಿರಬೇಕು ಎಂದರು.
ಮುನಿರತ್ನ ಶಾಸಕರಿದ್ದಾರೆ, ಈ ಹಿಂದೆ ಸಚಿವರಾಗಿದ್ದವರು ಅವರನ್ನು ಬಂಧಿಸಿರುವುದರಿಂದ ನನಗೆ ಸಂತೋಷವಿಲ್ಲ. ಆದರೆ ಅವರು ಕಾನೂನು ಉಲ್ಲಂಘನೆ ಮಾಡಿದರೆ ಪೊಲೀಸರು ಏನು ಮಾಡಬೇಕು?. ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಅದು ನಾನ್ ಬೇಲೆಬಲ್ ಕೇಸ್ ಆಗಿದ್ದು, ಅವರ ಪದ ಪ್ರಯೋಗ ಸರಿಯಲ್ಲ. ಅವರು ಹೀಗೆ ಮಾತನಾಡಿದ್ದು ತಪ್ಪು ಎಂದು ಹೇಳಿದರು.
ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಮಾಡಿಸಿಕೊಡುವ ಪ್ರಯತ್ನ ಮಾಡಿದ್ದೇವೆ. ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು ಶಾಸಕರು, ಮಂತ್ರಿಗಳು ನಿಗಮ ಮಂಡಳಿಯಲ್ಲಿ ನೇಮಕ ಕುರಿತು ಕಾರ್ಯಪ್ರವೃತ್ತರಾಗಿದ್ದಾರೆ. ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವುದು ನಮ್ಮ ಜವಾಬ್ದಾರಿಯಾಗಿದ್ದು ಪ್ರತಿ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅವಕಾಶ ಮಾಡಿ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಈಗಾಗಲೇ ನಿಗಮ, ಮಂಡಳಿಗಳ ನೇಮಕಾತಿ ಕುರಿತು ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ಇದ್ದು ಅವರು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಮಾಡಿಸಿಕೊಡುವ ವಿಶ್ವಾಸವಿದೆ. ಎಲ್ಲಾ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ಸದ್ಯ ಎಷ್ಟು ಜನರಿಗೆ ಅವಕಾಶ ಸಿಕ್ಕಿದೆ ಎಂದು ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಕಾರ್ಯಕರ್ತರಿಗೆ ಅಧಿಕಾರಿ ಸಿಗದ ಬಗ್ಗೆ ಪ್ರತಿಕ್ರಿಯಿಸಿ, ಇಲ್ಲಿ ತಾರತಮ್ಯ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಮಾಧ್ಯಮದವರು ಜಿಲ್ಲೆಗೆ ನಿಗಮ, ಮಂಡಳಿ ನೇಮಕದಲ್ಲಿ ಅನ್ಯಾಯವಾಗಿದೆ ಎಂದು ಸುದ್ದಿ ಮಾಡಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದರು ಎಂದರು.
ಸಿದ್ದರಾಮಯ್ಯನವರೇ 5 ವರ್ಷ ಸಿಎಂ: ಸಿದ್ದರಾಮಯ್ಯ ರಾಜೀನಾಮೆಗೆ ಪ್ರತಿಪಕ್ಷ ನಾಯಕರು ಆಗ್ರಹಿಸುತ್ತಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?. ಏನು ಕಾರಣವಿದೆ?. ಏನು ತಪ್ಪು ಮಾಡಿದ್ದಾರೆ?. ಉದ್ದೇಶಪೂರ್ವಕವಾಗಿ ಬಿಜೆಪಿಯವರು ಸತ್ಯಕ್ಕೆ ದೂರವಾದ ಆರೋಪ ಸೃಷ್ಟಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವ ತಪ್ಪೂ ಮಾಡಿಲ್ಲ. ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದರು.
ಇದನ್ನೂ ಓದಿ: ಶಾಸಕ ಮುನಿರತ್ನ ಪರಿಸ್ಥಿತಿ ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - lakshmi hebbalkar