ಬೆಂಗಳೂರು: ಬೆಂಗಳೂರಿಂದ ಬರುವ ತೆರಿಗೆ ಹಣ ಎಲ್ಲಿ ಕೊಡುತ್ತಿದ್ದೀರಿ? ಬೆಂಗಳೂರು ಅಭಿವೃದ್ಧಿಗೆ ಹಣ ಕೊಡಿ ಎಂದು ಬಿಜೆಪಿ ಶಾಸಕ ಮುನಿರತ್ನ ಆಗ್ರಹಿಸಿದರು. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ವೇಳೆ ಮಾತನಾಡಿದ ಅವರು, ಮೊನ್ನೆ ನೀವು ದೆಹಲಿಗೆ ಹೋಗಿ ನಮ್ಮ ತೆರಿಗೆ ನನ್ನ ಹಕ್ಕು ಪ್ರತಿಭಟನೆ ಮಾಡಿದ್ದೀರಿ. ಬೆಂಗಳೂರಲ್ಲಿ ಶೇ.60ರಷ್ಟು ತೆರಿಗೆ ನಾವು ಕೊಡುತ್ತಿದ್ದೇವೆ. ಹಾಗಾದರೆ ನಮಗೆ ಎಷ್ಟು ಹಣ ಕೊಡಬೇಕು. ನಮಗೆ ಎಷ್ಟು ಕೊಡುತ್ತಿದ್ದಾರೆ. ಸಂಸದ ಡಿ.ಕೆ.ಸುರೇಶ್ ಅವರು ಗುಜರಾತ್ಗೆ ಒಂದು ನ್ಯಾಯ ನಮಗೊಂದು ನ್ಯಾಯ ಸಹಿಸಲ್ಲ ಅಂತ ಹೇಳಿದ್ದಾರೆ. ಬೆಂಗಳೂರು ದುಡೀತಾ ಇದೆ ಅಂತ ನೀವು ಬೇರೆಯವರಿಗೆ ಕೊಡುತ್ತಿದ್ದೀರಿ ಎಂದು ಟೀಕಿಸಿದರು.
ಬೆಂಗಳೂರಿನ ಶೇ.60 ತೆರಿಗೆ 16,000-19,000 ಕೋಟಿ ರೂ. ಇಡೀ ರಾಜ್ಯಕ್ಕೆ ಕೊಡುವುದಾದರೆ, ಬೆಂಗಳೂರಿಗೆ ಏನು ಕೊಟ್ಟಿದ್ದೀರಿ?. ಬಿಬಿಎಂಪಿ ಅನುದಾನದಿಂದ ಮಾಡಿರುವ ಕಾಮಗಾರಿಗಳಿಗೆ ಮೂರು ವರ್ಷದಿಂದ ಹಣ ಕೊಟ್ಟಿಲ್ಲ. ಗುತ್ತಿಗೆದಾರರು ಬಿಲ್ ಪಾವತಿಗೆ ಕಾಯುತ್ತಿದ್ದಾರೆ. ಇನ್ನೂ ಬಿಲ್ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಪುಲಕೇಶಿನಗರಕ್ಕೆ 98.50 ಲಕ್ಷ ರೂ. ಸರ್ವಜ್ಞ ನಗರಕ್ಕೆ 113 ಕೋಟಿ, ಶಾಂತಿನಗರಕ್ಕೆ 118 ಕೋಟಿ, ಶಿವಾಜಿನಗರಕ್ಕೆ 75.85 ಕೋಟಿ ರೂ., ಗೋವಿಂದರಾಜನಗರ 51 ಕೋಟಿ, ಬ್ಯಾಟರಾಯನಪುರಕ್ಕೆ 121 ಕೋಟಿ ರೂ. ಅನುದಾನ ನೀಡಿದ್ದೀರಿ. ಆದರೆ, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅತ್ಯಲ್ಪ ಹಣ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರಿರುವ ಬೆಂಗಳೂರಿನ ಕ್ಷೇತ್ರಗಳಿಗಾದರೂ ಕೊಡಿ, ಆದರೆ ಬೆಂಗಳೂರಿಗೆ ಒಳ್ಳೆಯದು ಮಾಡಿ. ಬೆಂಗಳೂರು ನಗರಕ್ಕೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದರು.
ಬೆಂಗಳೂರು ಟನಲ್ ಮಾರ್ಗ ಕಷ್ಟ ಇದೆ: ಬೆಂಗಳೂರು ಸುರಂಗ ಮಾರ್ಗದ ಬಗ್ಗೆ ಪ್ರಸ್ತಾಪಿಸಿದ ಅವರು, ಸುರಂಗ ರಸ್ತೆ ಕಷ್ಟ ಇದೆ, ಬಜೆಟ್ನಲ್ಲಿ ಅನುದಾನ ಕೊಟ್ಟಿಲ್ಲ. ಪ್ರಾಯೋಗಿಕ ಟನೆಲ್ ರಸ್ತೆ ಕಾಮಗಾರಿ ರಸ್ತೆಯಲ್ಲಿ ಅಂಡರ್ ಗ್ರೌಂಡ್ನಲ್ಲಿ ಯೂಟಿಲಿಟಿ ಹಾದು ಹೋಗಿದೆ. ಕನಿಷ್ಠ ಟೆಂಡರ್ ಕರೆಯಲು ಸಹ ಬಜೆಟ್ನಲ್ಲಿ ಹಣ ಇಟ್ಟಿಲ್ಲ. ದೇಶದಲ್ಲಿ ಬೆಂಗಳೂರು ಟ್ರಾಫಿಕ್ನಲ್ಲಿ ನಂಬರ್ ಒನ್. ಸ್ವಾತಂತ್ರ್ಯ ಬಂದ ನಂತರ ಬೆಂಗಳೂರಿನಲ್ಲಿ ಎಷ್ಟು ರಸ್ತೆ ಅಗಲೀಕರಣ ಆಗಿದೆ ಹೇಳಲಿ. 2007-08 ರಲ್ಲಿ ಬಿಟ್ಟು ಇದುವರೆಗೆ ರಸ್ತೆ ಅಗಲೀಕರಣಕ್ಕೆ ಕೈ ಹಾಕಿಲ್ಲ. ಬೆಂಗಳೂರಿನಲ್ಲಿ ಶೇ.60 ತೆರಿಗೆ ಸಂಗ್ರಹ ಆಗ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ ಎಷ್ಟು ಅಭಿವೃದ್ಧಿ ಮಾಡ್ತಿದಾರೆ. ಬೆಂಗಳೂರಿಗೆ ಬಜೆಟ್ನಲ್ಲಿ ಹಣ ಕೊಟ್ಟಿಲ್ಲ. ಬೆಂಗಳೂರಿನ ತೆರಿಗೆ ಹಣ ಬೇರೆ ಕಡೆ ಬಳಸ್ತಾರೆ. ಬೆಂಗಳೂರು ಅಭಿವೃದ್ಧಿ ಮಾಡಿ ಮೊದಲು, ನಂತರ ಬೇರೆಯದನ್ನೂ ಮಾಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಸದಸ್ಯರ ವಿರೋಧದ ಮಧ್ಯೆ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಅಂಗೀಕಾರ