ಹುಬ್ಬಳ್ಳಿ: 'ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿಯವರ ಮಗ ಆಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು. ಅಲ್ಲದೇ ಮಠಪತಿಯವರ ಕುಟುಂಬಕ್ಕೆ ಆ ದೇವರು ನೋವನ್ನು ಸಹಿಸುವ ಶಕ್ತಿ ನೀಡಲಿ' ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಶವಾಗಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಶೇಖರಯ್ಯ ಮಠಪತಿಯವರ ಮಗನ ಕೊಲೆ ಪ್ರಕರಣದ ಬಗ್ಗೆ ಸ್ಪಷ್ಟತೆ ಇಲ್ಲ. ಈಗಾಗಲೇ ಮಠಪತಿಯವರು ಹೇಳಿರುವ ರೀತಿಯಲ್ಲಿ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರ ಜೊತೆಗೆ ಮಾತನಾಡಿದ್ದೇನೆ. ಪ್ರಕರಣದ ಬಗ್ಗೆ ಕುಲಂಕೂಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಕೇವಲ ಹಣೆಗೆ ಮಾತ್ರವೇ ಹೊಡೆತ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯು ಸೂಕ್ತ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕಿದೆ' ಎಂದು ಮಹೇಶ್ ಟೆಂಗಿನಕಾಯಿ ಆಗ್ರಹಿಸಿದರು.
ಆಕಾಶ್ ಮಠಪತಿ ಪಾರ್ಥಿವ ಶರೀರ ಮೆರವಣಿಗೆ: ಆಕಾಶ್ ಮಠಪತಿಯ ಮರಣೋತ್ತರ ಪರೀಕ್ಷೆಯ ಬಳಿಕ ಕಿಮ್ಸ್ ಶವಾಗಾರದಿಂದ ಆನಂದ ನಗರದ ಮುಕ್ತಿಧಾಮಕ್ಕೆ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಪೊಲೀಸ್ ಬಂದೋಬಸ್ತ್ ಮೂಲಕ ತೆಗೆದುಕೊಂಡು ಹೋಗಲಾಯಿತು. ಇನ್ನು, ಹುಬ್ಬಳ್ಳಿ -ಧಾರವಾಡ ಅವಳಿನಗರದ ಬಹುತೇಕ ಆಟೋಗಳು ಕೂಡ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ: ಆಕಾಶ್ ಹಿರೇಮಠ ಕೊಲೆ ಪ್ರಕರಣ, 8 ಆರೋಪಿಗಳ ಬಂಧನ - Hubballi Youth Murder Case