ಬೆಂಗಳೂರು/ಬೆಳಗಾವಿ: ಕಲ್ಯಾಣ ಕರ್ನಾಟಕ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಅಭಿವೃದ್ಧಿಗೂ 371 ಜೆ ವಿಶೇಷ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕ ಎನ್. ಹೆಚ್. ಕೋನರೆಡ್ಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಅವರು, ಕಿತ್ತೂರು ಕರ್ನಾಟಕ ತುಂಬಾ ಹಿಂದುಳಿದಿದೆ. ಕಲ್ಯಾಣ ಕರ್ನಾಟಕದವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೋ ಇಟ್ಟುಕೊಳ್ಳಬೇಕು ಎಂದರು.
ಬೆಣ್ಣೆ ಹಳ್ಳದ ಪ್ರವಾಹದಿಂದ ನಾಲ್ಕು ತಾಲೂಕು ಪ್ರವಾಹಕ್ಕೆ ಸಿಲುಕುತ್ತವೆ. ಡಾ.ಪರಮಶಿವಯ್ಯ ಅವರ ವರದಿಯಂತೆ ಬೆಣ್ಣೆ ಹಳ್ಳದ ಪ್ರವಾಹ ತಗ್ಗಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಯೋಜನೆ 2013 ರಲ್ಲಿ ಪ್ರಾರಂಭವಾದರೂ ಈಗ ಟೆಂಡರ್ ಕರೆಯುವ ಹಂತಕ್ಕೆ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ಬಗೆಯ ರಸ್ತೆಗಳು ಹಾಳಾಗಿವೆ. ಬೆಳಗಾವಿಯ ಅಧಿವೇಶನ ಕೇವಲ ಪ್ರತಿಭಟನೆಗೆ ಸೀಮಿತವಾಗದೇ ಪಕ್ಷಾತೀತವಾಗಿ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಕಾರ್ಯವಾದರೆ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ಶಿಕ್ಷಣ, ನೀರಾವರಿ, ಸಾರಿಗೆ ಸೇರಿದಂತೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ವರದಿ ಪಡೆಯಬೇಕು. ಆ ವರದಿ ಆಧರಿಸಿ ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವಂತಾಗಬೇಕು ಎಂಬ ಸಲಹೆ ನೀಡಿದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಸಚಿವರು ಸಮಸ್ಯೆಗಳನ್ನು ಕೇಳುವುದೂ ಇಲ್ಲ, ಬಗೆಹರಿಸುವುದೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಸಿಗೆ ಬಂದರೆ ಜನ ನೀರಿಗಾಗಿ ಹಾಹಾಕಾರ ಅನುಭವಿಸುವ ಪರಿಸ್ಥಿತಿ ಇದೆ. ಸರಿಯಾದ ಶೈಕ್ಷಣಿಕ ವ್ಯವಸ್ಥೆಗಳಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಇಲ್ಲ. ಮುದುಗಲ್, ಹಟ್ಟಿ, ಲಿಂಗಸೂರು ಪಟ್ಟಣಗಳಲ್ಲಿ ಎಂಟು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಕಳೆದ ಅಧಿವೇಶನದಲ್ಲಿ ಸಚಿವರು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದ್ರೆ ಈವರೆಗೂ ಯಾವುದೇ ಕೆಲಸ ಆಗಿಲ್ಲ. ಎಂಟು ದಿನಗಳಿಗೊಮ್ಮೆ ನೀರು ಸಂಗ್ರಹಿಸಿ ಜನ ಬಳಕೆ ಮಾಡುತ್ತಿದ್ದಾರೆ. ಇದೇ ವೇಳೆ ತಮ್ಮ ಮಾತುಗಳಿಗೆ ಸಚಿವರು ಗಮನ ಹರಿಸುತ್ತಿಲ್ಲ. ನೀರನ್ನು ಪೂರೈಸುತ್ತಿಲ್ಲ. ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಹಟ್ಟಿ ಚಿನ್ನದ ಗಣಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಲಾಭ ಇದೆ. ಆದರೆ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ರಾಯಚೂರು ಜಿಲ್ಲೆಯಿಂದ ಪ್ರತಿ ವರ್ಷ 45 ರಿಂದ 50 ಸಾವಿರ ಮಂದಿ ಗುಳೇ ಹೋಗುತ್ತಿದ್ದಾರೆ. ಈ ವೇಳೆ ಅಪಘಾತವಾಗಿ ಹತ್ತಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಮೃತರಿಗೆ ಪರಿಹಾರ ಕೊಟ್ಟು ಸರ್ಕಾರ ಕೈತೊಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಕ್ಷೇತ್ರಕ್ಕೆ ಒಂದರಂತೆ ಕಾರ್ಖಾನೆ ಆರಂಭಿಸಿ. ಐದು ಸಾವಿರ ಮಹಿಳೆಯರಿಗೆ ಕೆಲಸ ಕೊಡಿ. ಗೃಹಲಕ್ಷ್ಮೀ ಯೋಜನೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಉದ್ಯೋಗ ಸೃಷ್ಟಿಯ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಒತ್ತಾಯಿಸಿದರು.
371 ಜೆ ತಿದ್ದುಪಡಿಯಿಂದ ಸ್ಥಳೀಯರಿಗೆ ಅನುಕೂಲವಾಗುತ್ತಿಲ್ಲ. ಬೆಂಗಳೂರು ತುಮಕೂರಿನ ಜನ ಕಲ್ಯಾಣ ಕರ್ನಾಟಕ ಮೀಸಲಾತಿ ಸೌಲಭ್ಯ ಪಡೆದು ನೇಮಕವಾಗುತ್ತಾರೆ. ಒಂದೆರಡು ವರ್ಷ ಕೆಲಸ ಮಾಡಿ ತಮ್ಮ ಜಿಲ್ಲೆಗೆ ವರ್ಗಾವಣೆಯಾಗುತ್ತಿದ್ದಾರೆ. ಇಲ್ಲಿ ಕೆಲಸ ಮಾಡಲು ಸರ್ಕಾರಿ ಉದ್ಯೋಗಿಗಳೇ ಇಲ್ಲವಾಗಿದ್ದಾರೆ. ಅತಿಥಿ ಶಿಕ್ಷಕರಿಗೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ನೌಕರಿ ಭದ್ರತೆ ಇಲ್ಲವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ ಎಂದು ಹೇಳಿಕೆ ನೀಡುತ್ತಿದೆ. ಆದರೆ ಅದರಲ್ಲಿ ಯಾವ ಕೆಲಸಗಳೂ ಆಗುತ್ತಿಲ್ಲ ಎಂದರು.
ಇನ್ನೂ 5 ಸಾವಿರ ಕೋಟಿ ರೂ. ಅನುದಾನ ಸೇರಿಸಿ ಒಟ್ಟು 10 ಸಾವಿರ ಕೋಟಿ ರೂ.ಗಳಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿ. ಸರ್ಕಾರಿ ಶಾಲೆಗಳು ಮಳೆ ಬಂದರೆ ಸೋರುತ್ತಿವೆ. ಸರ್ಕಾರ ಯುವ ನಿಧಿಯಡಿ ಯುವ ಸಮುದಾಯಕ್ಕೆ ಮಾಸಾಶನ ನೀಡುತ್ತಿದೆ. ಅದರ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದು ಮಾನಪ್ಪ ವಜ್ಜಲ್ ಒತ್ತಾಯಿಸಿದರು.
ಜೆಡಿಎಸ್ ಶಾಸಕ ನೇಮಿರಾಜ್ ನಾಯಕ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಅಷ್ಟೇ ರೈತರು, ದೀನ ದಲಿತರ, ರೈತ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡಿದ್ದೇವೆ. ಆದರೆ, ಅವರಿಗೆ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಬಡತನ ನಿರ್ಮೂಲನೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದಕ್ಕಾಗಿ ಹೆಚ್ಚು ರೈತಪರ ಯೋಜನೆಗಳನ್ನು ಜಾರಿಗೊಳಿಸಬೇಕು. ಐದು ವರ್ಷದ ಅವಧಿಯಲ್ಲಿ ಎರಡು ವರ್ಷದ ಆಯವ್ಯಯದಲ್ಲಿ ಕನಿಷ್ಠ 50 ರಷ್ಟು ಅನುದಾನ ರೈತಪರ ಯೋಜನೆಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಸಾಕಷ್ಟು ಅನುದಾನ ಕೊಟ್ಟಿದ್ದರು. ಅದೇ ರೀತಿ ರಾಜ್ಯ ಸರ್ಕಾರ ಅನುದಾನ ಒದಗಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು ಎಂದರು.
ಇದನ್ನೂ ಓದಿ: ತೂಕದಲ್ಲಿ ಮೋಸದ ಬಗ್ಗೆ ದೂರು ನೀಡುವ ರೈತರಿಗೆ ಒಂದು ಲಕ್ಷ ರೂ. ನಗದು ಬಹುಮಾನ : ಸಚಿವ ಶಿವಾನಂದ ಪಾಟೀಲ