ರಾಮನಗರ: ರಾಮದೇವರ ಬೆಟ್ಟದಲ್ಲಿ ಅಭೂತಪೂರ್ವ ರಾಮಮಂದಿರ ನಿರ್ಮಾಣ ಆಗುತ್ತದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ರಾಮನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನ ಪಾದಸ್ಪರ್ಶವಾದ ಜಾಗದಲ್ಲಿ ಒಳ್ಳೆಯ ದೇಗುಲ ಆಗುತ್ತದೆ. ಮೊನ್ನೆ ರಾತ್ರಿ ಸಂಸದ ಡಿ.ಕೆ.ಸುರೇಶ್ ಅವರು ನನ್ನ ಮತ್ತು ಪ್ರವಾಸೋದ್ಯಮ ಸಚಿವರ ಜೊತೆ ಚರ್ಚಿಸಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಹಣ ನಿಗದಿ ಮಾಡಿ ಅಭಿವೃದ್ಧಿ ಮಾಡುತ್ತೇವೆ ಎಂದರು.
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರಾಗಿರುವ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ರಾಮನ ವಿಚಾರ ಹೊಸದು, ನಮಗಲ್ಲ. ದೇವರ ಕಾಲಿನ ಧೂಳಿನಿಂದ ಈ ಪ್ರಪಂಚ ಸೃಷ್ಟಿಯಾಗಿದೆ. ಪ್ರಪಂಚ ಸೃಷ್ಟಿಯಾದ ಮೇಲೆ ಎಲ್ಲ ದೇವರ ನಾಮ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಶ್ರೀರಾಮನ ಪರವಾಗಿ ಮಾತನಾಡಿದ್ದಕ್ಕೆ ಅಲ್ಪಸಂಖ್ಯಾತ ನಾಯಕರು ನಿಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ, ಈ ರೀತಿಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಮಣ್ಣಿನಲ್ಲಿ ಎಲ್ಲಾ ಧರ್ಮಗಳಿಗೂ ಗೌರವವಿದೆ. ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ನಾನು ಜಾತ್ಯಾತೀತ ವ್ಯಕ್ತಿ. ಶ್ರೀರಾಮ ಎಲ್ಲರ ದೇವರು. ದೇವರ ವಿಚಾರದಲ್ಲಿ ನಾನೆಂದಿಗೂ ರಾಜಕೀಯ ಮಾಡಲ್ಲ. ನಮ್ಮ ಕ್ಷೇತ್ರದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಮಾಡಿ ದಕ್ಷಿಣ ಭಾರತದ ಅಯೋಧ್ಯೆ ಮಾಡಲು ಸಿದ್ಧತೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ರಾಮ ಮಂದಿರ ಕಟ್ಟುವ ಮೂಲಕ ವಿಶ್ವದ ಗಮನ ಸೆಳೆದ ಪ್ರಧಾನಿ ಮೋದಿ: ಶಾಸಕ ಜನಾರ್ದನ ರೆಡ್ಡಿ ಶ್ಲಾಘನೆ