ಮೈಸೂರು: 40 ವರ್ಷದ ರಾಜಕೀಯದಲ್ಲಿ ನನ್ನ ಮೇಲೆ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು. ಮಂಗಳವಾರ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಸ್ಥಳದಲ್ಲಿ ಸೇರಿದ್ದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನ್ಯಾಯಾಂಗದ ಮೇಲೆ ನನಗೆ ಅಪಾರದವಾದ ಗೌರವ ಇದೆ. ನಾನು ಇಂದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ದೇವರು ಹಾಗೂ ರಾಜ್ಯದ ಜನರ ಮೇಲೆ ನನಗೆ ನಂಬಿಕೆ ಇದೆ.
40 ವರ್ಷದ ರಾಜಕೀಯದಲ್ಲಿ ನನ್ನ ಮೇಲೆ ಇದೇ ಫಸ್ಟ್ ಕೇಸ್ ಆಗಿರುವುದು. ಭವಿಷ್ಯದಲ್ಲಿ ತಾಯಿ ಚಾಮುಂಡೇಶ್ವರಿ ಏನು ಕರುಣೆ ತೋರಿಸುತ್ತಾಳೆ ನೋಡೋಣ. ಉದ್ದೇಶಪೂರ್ವಕವಾಗಿ ಮಾಡಿದ್ದರೆ ಅದನ್ನು ತಾಯಿಗೆ ಬಿಟ್ಟಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನು ಏನು ಮಾತನಾಡಲ್ಲ ಎಂದು ತಿಳಿಸಿದರು.
ಜೈಲಿನಿಂದ ಹೊರಬಂದ ಬಳಿಕ ಚಾಮುಂಡೇಶ್ವರಿ ದರ್ಶನ ಪಡೆದ ಅವರು, ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬಕ್ಕೆ ಅರ್ಚನೆ ಮಾಡಿಸಿದರು. ಹೆಚ್.ಡಿ.ದೇವೇಗೌಡ, ಚನ್ನಮ್ಮ, ಭವಾನಿ ರೇವಣ್ಣ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹೆಸರು ಹೇಳಿ ಅರ್ಚನೆ ಮಾಡಿಸಿದ ರೇವಣ್ಣ, ಗರ್ಭಗುಡಿಯಲ್ಲಿ ನಿಂತು ಕುಟುಂಬ ನೆನಪಿಸಿಕೊಂಡರು. ಸುಮಾರು 20 ನಿಮಿಷ ಚಾಮುಂಡಿಗೆ ಪಾರ್ಥನೆ ಮಾಡಿದ ನಂತರ ಬಲಗೈಗೆ ರಕ್ಷಾ ಸೂತ್ರ ಕಟ್ಟಿಸಿಕೊಂಡು ದೇಗುಲದಿಂದ ನಿರ್ಗಮಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜೆಡಿಎಸ್ ಮುಖಂಡರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ರವಿಕುಮಾರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನೂ ಓದಿ: ಜೈಲಿನಿಂದ ನೇರವಾಗಿ ದೇವೇಗೌಡರ ನಿವಾಸಕ್ಕೆ ಬಂದ ರೇವಣ್ಣ: ಕಾರ್ಯಕರ್ತರ ಕಂಡು ಕಣ್ಣೀರು - HD Revanna