ಬೆಂಗಳೂರು : ನೀವು ಮೂಲತಃ ರಾಮನಗರ ಜಿಲ್ಲೆಯವರಾ?. ನಮ್ಮ ನೋವು ನಮಗೆ ಗೊತ್ತು, ನಿಮಗೆ ಗೊತ್ತಾಗುವುದಿಲ್ಲ ಎಂದು ರಾಮನಗರ ಕಾಂಗ್ರೆಸ್ ಶಾಸಕ ಹೆಚ್ ಎ ಇಕ್ಬಾಲ್ ಹುಸೇನ್ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಲು ತೀರ್ಮಾನಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸುತ್ತಾ, ಮೂಲತ: ನಾವು ಬೆಂಗಳೂರಿನವರು. ಬಳಿಕ ನಮ್ಮನ್ನು ರಾಮನಗರ ಜಿಲ್ಲೆ ಅಂತ ಘೋಷಣೆ ಮಾಡಿದರು. ಜಿಲ್ಲೆ ಎಂದು ಘೋಷಿಸಿದರೂ ಅದು ಜಿಲ್ಲೆ ಆಗಲಿಲ್ಲ. ಜಿಲ್ಲೆಯ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಅಭಿವೃದ್ಧಿಗೋಸ್ಕರ ನಾವು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾಯಿಸಲು ಕೇಳುತ್ತಿದ್ದೇವೆ ಎಂದರು.
ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿದೆ. ರಾಮನಗರ ಬಿಡದಿ ಸಮೀಪ ಬಂದಿದೆ. ಅಭಿವೃದ್ಧಿ ಆಗಲಿ ಎಂಬುದು ನಮ್ಮ ಬಯಕೆ. ಜಿಲ್ಲೆಗೆ ಮೆಟ್ರೋ ಬರುತ್ತಿದೆ. ಏರ್ಪೋರ್ಟ್ ತರಲು ಡಿಕೆಶಿ ಯೋಚನೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗಲೆಂದು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಲು ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ಹೆಚ್ಚಾಗುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ರೈತರಿಗೆ ದುಡ್ಡು ಸಿಗುತ್ತೆ. ಆಸ್ತಿ ಮೌಲ್ಯ ಹೆಚ್ಚಾಗಲಿದೆ. ರೈತರಿಗೆ ಆಸ್ತಿ ಮಾರಾಟ ಮಾಡಬೇಡಿ ಎಂದು ಹೇಳುತ್ತಿದ್ದೇವೆ. ರಿಯಲ್ ಎಸ್ಟೇಟ್ ದಂಧೆ ಎಲ್ಲಿ ಹೋದರೂ ಇದ್ದೇ ಇರುತ್ತೆ. ಅವರವರ ವೃತ್ತಿ ಮಾಡುತ್ತಿರುತ್ತಾರೆ. ಅಭಿವೃದ್ಧಿಗಾಗಿ ಕೆಲಸ ಮಾಡಿದರೆ ಲೂಟಿ ಆಗುತ್ತೆ. ರಿಯಲ್ ಎಸ್ಟೇಟ್ ಬೂಮ್ ಆಗುತ್ತೆ, ಆ ತರದ ದೂಳು ವಾಸನೆ ಮಾತ್ರ ನಮಗೆ ಗೊತ್ತಿಲ್ಲ. ಯಾರು ಹೇಳುತ್ತಾರೆ ಆ ವಾಸನೆ ಇರಬಹುದು. ನಮ್ಮ ಮನಸ್ಸು, ನಮ್ಮ ದೃಷ್ಟಿ ಅಭಿವೃದ್ಧಿ ಮಾಡಬೇಕು ಎಂಬುದೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದರು.
ಚನ್ನಪಟ್ಟಣ ಉಪಚುನಾವಣೆ ದೃಷ್ಟಿಯಿಂದ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಮೊದಲೇ ನಾವು ಬೆಂಗಳೂರು ಎಂದು ಘೋಷಣೆ ಮಾಡಿದ್ದೇವೆ. ಚನ್ನಪಟ್ಟಣ ನಮ್ಮ ಜಿಲ್ಲೆನೇ. ಅಭಿವೃದ್ಧಿ ಮಾಡಿ, ಸಹಕಾರ ಮಾಡಿ ಅಂತೀವಿ. ಈಗ ಮಾಡುತ್ತಿದ್ದೇವೆ ಎಂದರು.
ರಕ್ತಪಾತ ಆಗುತ್ತೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಕ್ತನೂ ಇಲ್ಲ. ಪಾತನೂ ಇಲ್ಲ. ಕುಡಿಯೋಕೆ ಸದ್ಯ ನೀರು ಕೊಟ್ಟರೆ ಸಾಕು. ಬೆಂಗಳೂರಿನ ಒಳಚರಂಡಿ ನೀರನ್ನು ನಾವು ಕುಡಿಯುತ್ತಿದ್ದೇವೆ. ಇದು ಏನು ರಕ್ತಪಾತನಾ?. ಇಪ್ಪತ್ತು ವರ್ಷ ಆಡಳಿತ ನಡೆಸಿದ್ದೀರಾ ಒಬ್ಬರಿಗೆ ಸೂರು ಕೊಟ್ಟಿಲ್ಲ, ನೀವೇ ಸೈಟ್ ಕೊಡುತ್ತೇನೆ ಅಂತ ಹೇಳಿ ಐದಾರು ಸಾವಿರ ಹಣ ಸಂಗ್ರಹ ಮಾಡಿ 17 ವರ್ಷವಾದರೂ ಏನೂ ಮಾಡಿಲ್ಲ. ಏಕೆ ರಕ್ತಪಾತ ಆಗುತ್ತೆ?. ನೀವು ಮೂಲತಃ ನಮ್ಮ ಜಿಲ್ಲೆಯವರಾ?. ನಮ್ಮ ಜಿಲ್ಲೆ ಜನಕ್ಕೆ ನಮ್ಮ ನೋವು ನಮಗೆ ಗೊತ್ತು. ನಿಮಗೆ ಗೊತ್ತಾಗುವುದಿಲ್ಲ. ನೀವು ರಾಜಕಾರಣಗೋಸ್ಕರಕ್ಕೆ ಬಂದು ರಾಜಕಾರಣ ಮಾಡಿ ಹೊರಟು ಹೋಗುತ್ತೀರಿ. ಜನರ ನೋವು ಕಟ್ಟಿಕೊಂಡು ನಿಮಗೆ ಏನು ಆಗಬೇಕು?. ನಿಮಗೆ ಓಟು ಬೇಕು ಅಷ್ಟೇ. ಅಧಿಕಾರ ಬೇಕು ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ - Ramanagara rename