ಮೈಸೂರು: ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಹೆಚ್.ಡಿ. ದೇವೇಗೌಡರು ಕರೆದಿಲ್ಲ. ಫೋನ್ ಮಾಡಿ ಕರೆದಿರುವುದಾಗಿ ಅವರು ಹೇಳಿದರೆ, ನಾನು ಇವತ್ತೇ ರಾಜಕಾರಣ ನಿವೃತ್ತಿಯಾಗುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಜಿಟಿಡಿ ಅವರನ್ನು ದೇವೇಗೌಡರೆ ಕರೆ ಮಾಡಿ ಕರೆದಿದ್ದರು ಎಂಬ ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆ ವೇಳೆ ನಾನು ದೇವೇಗೌಡರ ಜೊತೆ ಮಾತನಾಡಿಲ್ಲ. ಸಾ.ರಾ.ಮಹೇಶ್ ಸುಮ್ಮನೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಪ್ರಮಾಣ ಮಾಡುವಂತೆ ಚಾಮುಂಡಿಬೆಟ್ಟಕ್ಕೆ ಬಾ ಎಂದು ಕರೆಯುವುದು ಸರಿನಾ? ಎಂದು ಪ್ರಶ್ನಿಸಿದರು.
ನಾನು ಹೇಳುತ್ತಿರುವುದೇ ಸತ್ಯ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ಅಂದು ಸಂಜೆಯೇ ನನ್ನ ತಾಯಿ ಬಳಿ ಹೋಗಿ ತಪ್ಪೊಪ್ಪಿಕೊಂಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ, ಸುಳ್ಳು ಹೇಳುವವನೂ ಅಲ್ಲ ಎಂದರು.
ರಾಜಕಾರಣ ಮಾಡಲು ನನಗೆ ಯಾರ ಹೆಸರು ಬೇಕಿಲ್ಲ: ಯಾರೋ ಒಬ್ಬರ ಹೆಸರು ಇಟ್ಟುಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ನನಗಿಲ್ಲ. ಯಾರು ಇಲ್ಲದಿದ್ದರೂ ನಾನು ರಾಜಕಾರಣ ಮಾಡಿದ್ದೇನೆ. ರಾಜಕಾರಣ ಮಾಡಲು ನನಗೆ ಯಾರ ಹೆಸರು ಬೇಕಿಲ್ಲ. ನಾನು ಯಾರ ಕತ್ತನ್ನೂ ಕೊಯ್ದಿಲ್ಲ. ನನ್ನನ್ನು ಯಾರೂ ಯಾವ ಪಕ್ಷಕ್ಕೂ ಕರೆದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು ಎಂದು ಹೇಳಿದರು.
ಸಿ.ಎಂ. ಇಬ್ರಾಹಿಂ ಇಂದು ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಲು ಬಂದಿದ್ದರು. ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟುವ ಉತ್ಸಾಹ ಅವರಿಗಿದೆ. ಅದನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ರಾಜ್ಯ ಪ್ರವಾಸ ಮುಗಿಸಿ, ಮತ್ತೆ ಬರುತ್ತೇನೆ ಎಂದು ತಿಳಿಸಿ ಹೋಗಿದ್ದಾರೆ. ಶಾಸಕರನ್ನು ಕಟ್ಟಿಕೊಂಡು ಪಕ್ಷಗಳನ್ನು ಕಟ್ಟಲು ಆಗುವುದಿಲ್ಲ. ಜನರ ಬೆಂಬಲ ಬೇಕು, ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ. ಪಕ್ಷ ಕಟ್ಟುವ ಹಾಗೂ ತೃತೀಯ ರಂಗ ರಚನೆಯ ಬಗ್ಗೆ ನಾನು ಯಾರ ಜೊತೆ ಮಾತನಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಮಾತ್ರ ಭವಿಷ್ಯ ಎಂದು ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನಂಬಿದ್ದಾರೆ : ಡಿಸಿಎಂ ಡಿ ಕೆ ಶಿವಕುಮಾರ್