ಗಂಗಾವತಿ(ಕೊಪ್ಪಳ): ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿಗೆ ಬಿಜೆಪಿ ನಾಯಕರು ಮಹತ್ವದ ಹೊಣೆಗಾರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಗುರಿ ಇರಿಸಿಕೊಂಡಿರುವ ಕೇಸರಿ ಪಕ್ಷ ಇದಕ್ಕಾಗಿ ವ್ಯೂಹ ಹೆಣೆಯುತ್ತಿದೆ.
ಇದರ ಭಾಗವಾಗಿ ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ವಿಜಯನಗರ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಉತ್ತಮ ಹಿಡಿತ ಹೊಂದಿರುವ ರೆಡ್ಡಿ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶಕ್ಕೆ ಉನ್ನತ ಹುದ್ದೆ ನೀಡಿದೆ ಎಂದು ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಪರವಾಗಿ ವ್ಯಾಪಕ ಪ್ರಚಾರ ಮಾಡುವುದರ ಮೂಲಕ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ನೀಡಲಾಗಿದೆ. ಈ ಮೂಲಕ ರೆಡ್ಡಿ ಅವರ ರಾಜಕೀಯ ನೈಪುಣ್ಯತೆಯನ್ನೂ ಓರೆಗೆ ಹಚ್ಚುವ ಕೆಲಸ ಪಕ್ಷದ ಹೈಕಮಾಂಡ್ ಮಾಡಿದೆ.
ಒಂದೊಮ್ಮೆ ಈ ಟಾಸ್ಕ್ನಲ್ಲಿ ರೆಡ್ಡಿ ಯಶಸ್ವಿಯಾದರೆ, ಅವರಿಗೆ ಈ ಹಿಂದಿನ ರಾಜಕೀಯ ದಿನಗಳು ಮರುಕಳಿಸುವ ಸಾಧ್ಯತೆ ಇದೆ. ವೈಯಕ್ತಿಕ ವರ್ಚಸ್ಸು ಕೇವಲ ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ವೃದ್ಧಿಯಾಗಬಹುದೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.
12 ವರ್ಷ ವನವಾಸ: 12 ವರ್ಷ ವನವಾಸ ಅನುಭವಿಸಿ ಬಂದ ಬಳಿಕ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ಹಿಂದೇಟು ಹಾಕಿದ್ದ ಬಿಜೆಪಿಗೆ ಸ್ವತಂತ್ರ ಪಕ್ಷ ಕಟ್ಟಿ ರೆಡ್ಡಿ ತಿರುಗೇಟು ನೀಡಿದ್ದರು. ಕೆಆರ್ಪಿಪಿ ಗೆದ್ದಿದ್ದು ಒಂದೇ ಕ್ಷೇತ್ರವಾದರೂ ಪರೋಕ್ಷವಾಗಿ 12ರಿಂದ 25 ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು.
ಈ ರಾಜಕೀಯ ತಂತ್ರಗಾರಿಕೆಯ ಆಳ ಮತ್ತು ಅಗಲದ ಬಗ್ಗೆ ಮನವರಿಕೆ ಮಾಡಿಕೊಂಡಿರುವ ಬಿಜೆಪಿ ಇದೀಗ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ. ಪಕ್ಷ ನೀಡಿರುವ ಜವಾಬ್ದಾರಿಯನ್ನು ಹೊತ್ತುಕೊಂಡು ರೆಡ್ಡಿ ಈಗಾಗಲೇ ರಾಜ್ಯದ ನಾನಾ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ಕೈಗೊಂಡು ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಲ್.ಸಂತೋಷ್ ಭೇಟಿಯಾದ ಜನಾರ್ದನ ರೆಡ್ಡಿ - Janardhana Reddy