ಹುಬ್ಬಳ್ಳಿ: ಇಲ್ಲಿನ ಗಿರಣಿಚಾಳದಲ್ಲಿರುವ ಶತಮಾನದಷ್ಟು ಹಳೆಯ ಶಾಲಾ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಈ ವಿಷಯ ತಿಳಿದು ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸ್ಥಳಕ್ಕೆ ಭೇಟಿ ನೀಡಿ, ಕೃತ್ಯ ಎಸಗಿದರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ದುಷ್ಕೃತ್ಯದಲ್ಲಿ ಭಾಗಿಯಾಗಿದವರನ್ನು ಬಂಧಿಸಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ. ಶಿಕ್ಷಣ ಇಲಾಖೆಯವರು ದೂರು ನೀಡಿ, ಶೀಘ್ರ ದುರಸ್ತಿಗೆ ಮುಂದಾಗಬೇಕು. ಈ ರೀತಿ ಭೂ ಮಾಫಿಯಾ ನಡೆಯಬಾರದು. ರಾತ್ರೋರಾತ್ರಿ ಜೆಸಿಬಿ ತಂದು ಧ್ವಂಸ ಮಾಡಿರುವುದು ಸರಿಯಲ್ಲ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಾಲೆಯನ್ನು ಹೋರಾಟ ಮಾಡಿಯಾದರೂ ಉಳಿಸಿ, ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆ ಅಧಿಕಾರಿ ಅನಸೂಯ ಯಕ್ಕುಂಡಿ ಮಾತನಾಡಿ, ಶಾಲೆ ಧ್ವಂಸ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶಾಲೆಯಲ್ಲಿ 21 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಈ ಕೃತ್ಯ ನಡೆದಿದೆ. ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶಾಲೆಯ ಮುಖ್ಯಶಿಕ್ಷಕರು ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾವೇರಿ: ತುಂಬಿದ ನದಿಯಲ್ಲಿ ಸಿದ್ಧಾರೂಢ ಮತ್ತು ಮಲ್ಲಿಕಾರ್ಜುನಸ್ವಾಮಿಗೆ ತೆಪ್ಪೋತ್ಸವ - teppotsava