ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಜೆ ಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಬೆಳಗಿನ ಸುಮಾರ 2.30ರ ಸುಮಾರಿಗೆ ಜೆ.ಪಿ. ನಗರ ಠಾಣೆ ವ್ಯಾಪ್ತಿಯ ಸಾರಕ್ಕಿ ಬಳಿಯ ಚಾಮುಂಡಿಪುರದಲ್ಲಿ ಘಟನೆ ನಡೆದಿದ್ದು, ವಿಜಯ್ ಮತ್ತು ಇನ್ನಿಬ್ಬರಿಗೆ ಸೇರಿದ ಒಟ್ಟು ಮೂರು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಅಲ್ಲದೇ ಬೆಂಕಿಯಿಂದ ಉಂಟಾದ ಹೊಗೆಯಿಂದ ಮನೆಯಲ್ಲಿ ಸಾಕಿದ್ದ ಎರಡು ಗಿಳಿಗಳು ಸಹ ಸಾವನ್ನಪ್ಪಿವೆ.
ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ಕಿಟಕಿಯಿಂದ ನೋಡಿದಾಗ ತಿಳಿಯಿತು. ತಕ್ಷಣ ಅಕ್ಕಪಕ್ಕದವರೆಲ್ಲ ಬಂದು ನೋಡಿದಾಗ ಮೂರು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದ್ದವು. ಅಕ್ಕಪಕ್ಕದಲ್ಲಿದ್ದ ಇತರೆ ವಾಹನಗಳನ್ನು ಬೇರೆಡೆ ಸ್ಥಳಾಂತರಿಸಿದೆವು. ಕಿಟಕಿ ಪಕ್ಕದಲ್ಲಿದ್ದ ಟೈಲರಿಂಗ್ ಮಷಿನ್ ಹಾಗೂ ಕೆಲ ಬಟ್ಟೆಗಳಿಗೆ ಹಾನಿಯಾಗಿದೆ. ಸಾಕಿದ್ದ ಎರಡು ಗಿಳಿಗಳು ಸಾವನ್ನಪ್ಪಿವೆ. ಯಾವುದೂ ಸಹ ಎಲೆಕ್ಟ್ರಿಕ್ ವಾಹನಗಳಿರಲಿಲ್ಲ, ಇದು ಯಾರೋ ಉದ್ದೇಶಪೂರ್ವಕವಾಗಿ ಎಸಗಿರುವ ಕೃತ್ಯ ಎಂದು ಎಂದು ದ್ವಿಚಕ್ರ ವಾಹನದ ಮಾಲೀಕ ವಿಜಯ್ ತಿಳಿಸಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಜೆ.ಪಿ. ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.