ಬೆಂಗಳೂರು: ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಯಮಿತದ 19.34 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪದಡಿ ಸೊಸೈಟಿಯ ಉಸ್ತುವಾರಿ ಸಿಇಒ ಸೇರಿ 6 ಮಂದಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಂದಿನಿ ಲೇಔಟ್‌ನಲ್ಲಿರುವ ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಗಮದ ಅಧ್ಯಕ್ಷ ರಾಜು ವಿ ನೀಡಿದ ದೂರಿನ ಆಧಾರದ ಮೇಲೆ ಸೊಸೈಟಿಯ ಉಸ್ತುವಾರಿ ಸಿಇಒ ಪಿ.ಆಶಾಲತಾ, ಇವರ ಪತಿ ಸೋಮಶೇಖರ್ ಹಾಗೂ ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್, ಬಿಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್‌ಗಳು, ಕೆಎಸ್‌ಸಿಸಿಎಸ್‌ಎಫ್ ಆಡಿಟರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಫ್ಐಆರ್ನಲ್ಲೇನಿದೆ? "ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಗಮದಲ್ಲಿ 2015 ಜ.5ರಂದು ಎಫ್‌ಡಿಎ ಹಾಗೂ ಅಕೌಂಟೆಂಟ್ ಆಗಿ ಆಶಾಲತಾರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. 2018 ಮೇ 31ರಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಇವರನ್ನು ಉಸ್ತುವಾರಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಇವರ ವಶದಲ್ಲಿಯೇ ಇದ್ದು, ಲೆಕ್ಕ ಪರಿಶೋಧಕರಿಗೆ ಲೆಕ್ಕ ಪತ್ರಗಳನ್ನು ಒದಗಿಸುತ್ತಿದ್ದರು. ಕಳೆದ ಅ.9ರಂದು ಸಹಕಾರಿ ಸಚಿವರು ನಡೆಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಆಶಾಲತಾ ಅವರು ಸೊಸೈಟಿಯ ಹಣವನ್ನು ಅಪೆಕ್ಸ್ ಸಹಕಾರಿ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಮಾಡಿರುವುದಾಗಿ ತಿಳಿಸಿದ್ದರು. ಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ಎಂ.ಡಿ ಅವರು ಬಿಡಿಸಿಸಿ ಬ್ಯಾಂಕ್‌ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ನಿಯಮಿತದಿಂದ ಯಾವುದೇ ಠೇವಣಿಯನ್ನು ಮಾಡಿಲ್ಲವೆಂದು ತಿಳಿಸಿದ್ದರು. ನಂತರ ಆಶಾಲತಾ ಠೇವಣಿಯನ್ನಿಟ್ಟಿರುತ್ತೇವೆಂದು ಇದಕ್ಕೆ ಸಂಬಂಧಿಸಿದಂತೆ ಪಾಸ್‌ಬುಕ್‌ಗಳು ಮನೆಯಲ್ಲಿರುತ್ತವೆಂದು ತಿಳಿಸಿದ್ದರು. ನಂತರ ತನ್ನ ಗಂಡ ಮನೆಯ ಬೀಗ ಹಾಕಿಕೊಂಡು ಹೋಗಿರುತ್ತಾರೆ ಹಾಗೂ ಸಿಬ್ಬಂದಿ ರಜೆಯಲ್ಲಿರುವುದರಿಂದ ಸೋಮವಾರ ಕಚೇರಿಯಲ್ಲಿ ಇತ್ಯರ್ಥ ಪಡಿಸುತ್ತಾರೆಂದು ತಿಳಿಸಿದ್ದರು.
ಬಳಿಕ ಬ್ಯಾಂಕ್‌ನಲ್ಲಿದ್ದ 111 ಎಫ್ಡಿ ಖಾತೆಗಳ ಒಟ್ಟು 19.34 ಕೋಟಿ ರೂ. ನಕಲಿ ಠೇವಣಿ ಬಾಂಡ್‌ಗಳಿತ್ತು. ಕೆಲವು ನಿಶ್ಚಿತ ಠೇವಣಿಗಳನ್ನು ಆಶಾಲತಾ ಅವರೇ ಬರೆದಿದ್ದು, ಬ್ಯಾಂಕ್ ದೃಢೀಕರಣ ಪತ್ರಗಳನ್ನು ಅವರೇ ಖುದ್ದಾಗಿ ತಂದಿದ್ದು, ಲೆಕ್ಕ ಪರಿಶೋಧಕರಿಗೂ ನಕಲಿ ಪ್ರಮಾಣಪತ್ರ ನೀಡಿದ್ದಾರೆ. 2017ರಿಂದ ಬ್ಯಾಂಕಿನ ಸ್ಥಿರ ಠೇವಣಿಗಳ ಹಣವನ್ನು ತಮ್ಮ ಪತಿ ಸೋಮಶೇಖರ್ ಮತ್ತು ವಿಜಯ್ ಕಿರಣ್, ಮಂಜುನಾಥ್ ಜೆ, ಸುಜಯ್ ಅವರಿಗೆ ವರ್ಗಾವಣೆ ಮಾಡಿದ್ದಾರೆ. 2017 ರಿಂದ 2023 ರವರೆಗೆ ಮೂಲ ಸ್ಥಿರ ಠೇವಣಿ ವರ್ಗಾಯಿಸುವಾಗ ಅಧ್ಯಕ್ಷರ ನಕಲಿ ಸಹಿ ಹಾಕಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ ಮೂಲ ಎಫ್ಡಿ ಬಾಂಡ್‌ಗಳನ್ನು ಸಲ್ಲಿಸುವಾಗ ಕವರ್ ಲೆಟರ್‌ಗಳನ್ನು ಸಹಕಾರ ಪೆಡರೇಷನ್‌ನಲ್ಲಿ ಇಡಬೇಕಾಗಿದ್ದು, ಇದರಲ್ಲಿ ಅಧ್ಯಕ್ಷರು ಮತ್ತು ಸಿಇಒ ಇಬ್ಬರು ಸಹಿ ಮಾಡಬೇಕಾಗುತ್ತದೆ. ಆದರೆ, ಸಿಇಒ ಒಬ್ಬರೇ ಸಹಿ ಮಾಡಿ ಎಫ್ಡಿ ಮೊತ್ತವನ್ನು ಆಶಾಲತಾ ಅವರ ಪತಿಯ ವೈಯಕ್ತಿಕ ಖಾತೆಗೆ ಹಾಗೂ ವಿಜಯ್ ಕಿರಣ್, ಸುಜಯ್, ಮಂಜುನಾಥ್ ಖಾತೆಗೆ ವರ್ಗಾಹಿಸಿದ್ದರು" ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮುಡಾ ಪ್ರಕರಣ: ತಾರ್ಕಿಕ ಅಂತ್ಯದವರೆಗೆ ನನ್ನ ಹೋರಾಟ- ಸ್ನೇಹಮಯಿ ಕೃಷ್ಣ