ರಾಮನಗರ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾನು ಆಗಿನಿಂದಲೂ ಕುಮಾರಸ್ವಾಮಿ ಅವರನ್ನು ಕರಿಯಣ್ಣ ಅಂತಲೇ ಕರೆಯೋದು. ಅದನ್ನು ಉರ್ದುವಿನಲ್ಲಿ ಹೇಳಿದ್ದೇನೆ. ನಾನು ಮುಂಚೆಯಿಂದಲೂ ಹಾಗೆಯೇ ಕರೆಯುವುದು. ಅವರು ನನ್ನನ್ನು ಕುಳ್ಳ ಅಂತಾರೆ. ನಾನು ಪ್ರೀತಿಯಿಂದ ಕರಿಯಣ್ಣ ಅಂತಲೇ ಕುಮಾರಸ್ವಾಮಿ ಅವರನ್ನು ಕರೆದಿದ್ದೇನೆ'' ಎಂದು ತಿಳಿಸಿದರು.
ಆಟೋಮೆಟಿಕ್ ಆಗಿ ಆ ಪದ ಬಂತು: ''ಮುಂಚೆಯಿಂದಲೂ ಕರೆಯುವುದರಿಂದ ಆಟೋಮೆಟಿಕ್ ಆಗಿ ಆ ಪದ ಬಂತು. ನಮ್ಮ ಸಮಾಜವು ಖರೀದಿ ಮಾಡುವ ಸಮಾಜವಲ್ಲ. ಹಾಗಾಗಿ, ನಮ್ಮ ಸಮಾಜವನ್ನು ಖರೀದಿ ಮಾಡಲು ಆಗಲ್ಲ ಅಂದಿದ್ದೇನೆ'' ಎಂದರು.
ಮುಡಾ ತೀರ್ಪಿನ ಬಗ್ಗೆ ಬಾಯ್ತಪ್ಪಿ ಪದ ಬಳಕೆ: ಮುಡಾ ವಿಚಾರದಲ್ಲಿ ಒಂದು ಹೇಳಿಕೆ ಕೊಡುವಾಗ ಪೊಲಿಟಿಕಲ್ ಜಡ್ಜ್ಮೆಂಟ್ ಅಂತ ಹೇಳಿದ್ದೆ. ಬಾಯ್ತಪ್ಪಿ ಆ ಪದ ಬಳಕೆ ಮಾಡಿದ್ದೇನೆ. ಈ ಬಗ್ಗೆ ಕ್ಷಮೆಯನ್ನೂ ಕೇಳಿದ್ದೇನೆ. ನಾನು ಮಾತನಾಡಿರುವುದು ಸರಿ ಅಂತ ವಾದ ಮಾಡಿಲ್ಲ. ತಪ್ಪಾಗಿದೆ ಕ್ಷಮಿಸಿ ಎಂದು ಮನವಿ ಮಾಡಿದ್ದೇನೆ ಎಂದು ಮುಡಾ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ನೀಡಿದ್ದ ಹೇಳಿಕೆಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಪ್ರಚೋದನೆಯ ಹೇಳಿಕೆ ನೀಡಿರುವ ಮರುಳಾರಾಧ್ಯ ಶ್ರೀಗಳ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್