ಮಂಡ್ಯ: "ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಈಗ ಸಿದ್ದರಾಮಯ್ಯ ಸಿಎಂ. ಹೀಗಾಗಿ, ಸಿಎಂ ಖುರ್ಚಿ ಖಾಲಿ ಎಲ್ಲಿದೆ? ಖಾಲಿ ಇರುವಾಗ ಚರ್ಚೆ ಮಾಡಬೇಕು. ಖಾಲಿ ಇಲ್ಲದಿರುವಾಗ ಚರ್ಚೆ ಅಗತ್ಯವಿಲ್ಲ. ಈ ಬಗ್ಗೆ ಸ್ವಾಮೀಜಿಯ ಅಭಿಪ್ರಾಯ ವೈಯಕ್ತಿಕ. ಅವರ ಅಭಿಪ್ರಾಯ ತಪ್ಪು ಅನ್ನೋಕೆ ಆಗಲ್ಲ. ಈಗಾಗಲೇ ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನಿಸಿ ಆಗಿದೆ" ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯ ವಿಚಾರವಾಗಿ ಭಾನುವಾರ ಮಂಡ್ಯದಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
"ಒಕ್ಕಲಿಗರು, ಲಿಂಗಾಯತರು, ದಲಿತರು ಸ್ಥಾನಮಾನ ಕೇಳುವುದರಲ್ಲಿ ತಪ್ಪೇನಿದೆ?. ಆದರೆ ಈ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ಹಾಕಿದ ಗೆರೆಯನ್ನು ನಾವ್ಯಾರೂ ದಾಟುವುದಿಲ್ಲ. ಇದು ನಮ್ಮ ಪಕ್ಷದ ಪಾಲಿಸಿ" ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತಾಡದಂತೆ ಸಚಿವ, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಆ ವಿಚಾರ ನನಗೆ ಗೊತ್ತಿಲ್ಲ" ಎಂದರು.
ಈ ಕುರಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, "ಯಾರಿಗೂ ನೀವೇನೂ ಹೇಳಬೇಡಿ ಎಂದು ಪ್ರಜಾಪ್ರಭುತ್ವದಲ್ಲಿ ಹೇಳಲು ಆಗಲ್ಲ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದನ್ನು ತೀರ್ಮಾನಿಸಲು ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡಲಿದೆ" ಎಂದು ಹೇಳಿದರು.
"ಒಬ್ಬ ಮಗ ಹೆಚ್ಚು ಮಾತನಾಡುತ್ತಾನೆಂದು ಮನೆಯಿಂದ ಓಡಿಸಲು ಆಗಲ್ಲ. ಹಾಗೆಯೇ ಕೆಲ ಸಚಿವರು ಕೂಡ ಮಗನ ರೀತಿ ಮಾತನಾಡುತ್ತಿದ್ದಾರೆ. ಕೆಲ ಸನ್ನಿವೇಶಗಳಲ್ಲಿ ಹೀಗೆ ಆಗುವುದು ಸಾಮಾನ್ಯ. ಇನ್ನು ಸ್ವಾಮೀಜಿಯಿಂದ ಡಿಕೆಶಿ ಹೇಳಿಸಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ವಿಡಿಯೋ ನೋಡಿಕೊಂಡು ಮಾತನಾಡಕ್ಕಾಗುತ್ತಾ?, ಸಿಎಂ ಈ ಬಗ್ಗೆ ಹೇಳಿರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಸಿಎಂ ನಮ್ಮ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಹೇಳಬಹುದಿತ್ತು. ಈಗ ಸುಖಾಸುಮ್ಮನೆ ಹೇಳಲು ಆಗಲ್ಲ. ಪರಮೇಶ್ವರ್ ಅವರ ಜೊತೆ ಮಾತನಾಡಿರುವುದು ನನಗೆ ಹೇಗೆ ಗೊತ್ತಾಗುತ್ತದೆ?. ರೈತರ ಸಮಸ್ಯೆ ಆಲಿಸುತ್ತಾ ರಾಜ್ಯ ಸುತ್ತುತ್ತಿದ್ದೇನೆ. ರಾಜಕಾರಣಕ್ಕಿಂತ ರೈತರ ಸಮಸ್ಯೆ ಬಗೆಹರಿಸುವುದು ನನಗೆ ಮುಖ್ಯ" ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬುದು ಬಿಜೆಪಿಗರಿಗೆ ಹಗಲುಗನಸು: ಸಲೀಂ ಅಹ್ಮದ್ - Salim Ahmed
ರಾಜ್ಯದಲ್ಲಿ ಎರಡನೇ ಏರ್‌ಪೋರ್ಟ್ ನಿರ್ಮಾಣದ ಕುರಿತು ಮಾತನಾಡುತ್ತಾ, "ಇನ್ನೊಂದು ಕಾರ್ಗೋ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ತೀರ್ಮಾನ ಆಗಿದೆ. ನೆಲಮಂಗಲ ಅಥವಾ ಶಿರಾದಲ್ಲಿ ಮಾಡಬೇಕಾ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಮಂಡ್ಯದಲ್ಲಿ ಮಾಡಬೇಕೆಂದು ಸ್ಥಳೀಯ ಶಾಸಕರು ಅಭಿಪ್ರಾಯಪಟ್ಟಿದ್ದಾರೆ. ಮಂಡ್ಯದಲ್ಲಿ ವಿಮಾನ ನಿಲ್ದಾಣ ಆದರೆ, ಹಳೇ ಮೈಸೂರು ಭಾಗ ಅಭಿವೃದ್ಧಿಗೆ ಸಹಕಾರ ಆಗಲಿದೆ. ಮಂಡ್ಯದ ಸಂಸದರೇ ಕೇಂದ್ರದ ಪ್ರಭಾವಿ ಸಚಿವರಾಗಿದ್ದಾರೆ. ನಮ್ಮ ಸರ್ಕಾರ ಮಂಡ್ಯದಲ್ಲಿ ಏರ್‌ಪೋರ್ಟ್ ಮಾಡಲು ತಯಾರಿದೆ. ಕುಮಾರಸ್ವಾಮಿ ಕೇಂದ್ರ ಮಟ್ಟದಲ್ಲಿ ಪ್ರಯತ್ನ ಮಾಡಿದರೆ ಮಂಡ್ಯದಲ್ಲೇ ಏರ್‌ಪೋರ್ಟ್ ಆಗಲಿದೆ" ಎಂದು ತಿಳಿಸಿದರು.
"ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲೂ ಕ್ರಮ ವಹಿಸಲಾಗುತ್ತಿದೆ. ಡಿಸಿ, ಸಿಇಒಗೆ ಸೂಚನೆ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
ಮೈಶುಗರ್ ಕಾರ್ಖಾನೆಗೆ ಚಾಲನೆ: ರೈತರ ಜೀವನಾಡಿ ಮೈಶುಗರ್ ಕಾರ್ಖಾನೆಯಲ್ಲಿ ಸಂಪ್ರದಾಯದಂತೆ ಗಣಪತಿ ಹೋಮ, ವಿಶೇಷ ಪೂಜೆ ನೆರವೇರಿಸುವ ಮೂಲಕ ಭಾನುವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಬಾಯ್ಲರ್‌ಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪೂಜೆ ಸಲ್ಲಿಸಿದರು. ಪ್ರಸಕ್ತ ಸಾಲಿನಲ್ಲಿ ಸಕಾಲಕ್ಕೆ ಆರಂಭವಾಗುತ್ತಿರುವ ಕಾರ್ಖಾನೆಯಲ್ಲಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ಸ್ಥಗಿತವಾಗಿದ್ದ ಮೈಶುಗರ್ ಕಾರ್ಖಾನೆಯನ್ನು ಪುನರಾರಂಭಗೊಳಿಸಲು ಸರ್ಕಾರದಿಂದ ಕಳೆದ ಸಾಲಿನಲ್ಲಿ 50 ಕೋಟಿ ರೂ. ನೀಡಲಾಗಿದೆ. 2023-24ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಪೂರ್ಣವಾಗಿ ಹಣ ಪಾವತಿಸಲಾಗಿದೆ. ಈ ಬಾರಿ ಸರಿಯಾಗಿ ಮಳೆ ಬಾರದ ಕಾರಣ ಕಬ್ಬಿನ ಕೊರತೆ ಇರಲಿದೆ. ಆದರೂ ಸುಮಾರು 2,50,000 ಮೆ.ಟನ್ ಕಬ್ಬು ನುರಿಸುವ ಗುರಿ ಇದೆ" ಎಂದರು.
"ಕಾರ್ಖಾನೆ ಲಾಭ, ನಷ್ಟದ ಆಧಾರದ ಮೇಲೆ ಸದ್ಯಕ್ಕೆ ಕಾರ್ಯನಿರ್ವಹಿಸುವುದು ಕಷ್ಟ. ರೈತರ ಹಿತದೃಷ್ಟಿಯಿಂದ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಾಭದಾಯಕವಾಗಿ ನಡೆಯಲಿದೆ ಎಂಬ ನಂಬಿಕೆ ಇದೆ" ಎಂದು ತಿಳಿಸಿದರು.
ಇದನ್ನೂ ಓದಿ: ಜೂನ್ 30ರಂದು ಮೈಶುಗರ್ ಬಾಯ್ಲರ್‌ಗೆ ಅಗ್ನಿಸ್ಪರ್ಶ: 2.50 ಲಕ್ಷ ಟನ್ ಕಬ್ಬು ಅರೆಯುವ ಗುರಿ - Mysugar Factory