ಹಾವೇರಿ: "ಕಳೆದ ವರ್ಷ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಯಾಗಿದೆ. ಈ ವರ್ಷ ಕಬ್ಬು ಪೂರೈಸಿದ ರೈತರಿಗೆ ಜನವರಿವರೆಗೆ ಹಣ ನೀಡಲಾಗಿದೆ" ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಫೆಬ್ರವರಿ ತಿಂಗಳಿನ ಹಣ ಮಾತ್ರ ಬಾಕಿ ಇದೆ. ಅದನ್ನು ಕೊಡಬೇಕು ಅಂದರೆ ಸಕ್ಕರೆ ದರ ಏರಿಕೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಯಾರಿಗೂ ಹೇಳದೆ ಎಥೆನಾಲ್ ಪಾಲಿಸಿ ಜಾರಿಗೆ ತಂದಿದ್ದಲ್ಲದೆ, ಮತ್ತೆ ಅದನ್ನು ಹಿಂಪಡೆದಿದೆ" ಎಂದು ಹೇಳಿದರು.
"ಇದರಿಂದ 400 ಕೋಟಿ ರೂಪಾಯಿ ವೆಚ್ಚ ಮಾಡಿ ಎಥೆನಾಲ್ ಫ್ಯಾಕ್ಟರಿ ಪ್ರಾರಂಭಿಸಿದವರಿಗೆ ಭಾರಿ ನಷ್ಟ ಆಗಿದೆ. ಅಲ್ಲದೇ, ರಫ್ತು ಆಗದ ಕಾರಣ ಸಕ್ಕರೆ ದರ ಹೆಚ್ಚಾಗುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ದರ ಕೆ.ಜಿಗೆ 55 ರೂಪಾಯಿ ಇದೆ. ಆದರೆ ಭಾರತದಲ್ಲಿ ಲೋಕಸಭಾ ಚುನಾವಣೆ ಸಲುವಾಗಿ ಸಕ್ಕರೆ ದರ ಕೆ.ಜಿಗೆ 34 ರೂ. ಇದೆ. ಇದು ನಮ್ಮ ದೇಶದ ದುರ್ದೈವ. ಇದೊಂದೇ ಅಲ್ಲ, ರೈತರು ಯಾವುದೇ ಬೆಳೆ ಬೆಳೆದರೂ ಅದಕ್ಕೆ ಸೂಕ್ತ ದರ ಇಲ್ಲದಂತಾಗಿದೆ. ಅಕ್ಕಿ, ಕಬ್ಬು ಹಾಗೂ ತರಕಾರಿಗೂ ಸಹ ಬೆಲೆ ಇಲ್ಲ. ಎಲ್ಲ ನಿರ್ಯಾತ್ ಬಂದ್ ಮಾಡಿದ್ದರಿಂದ ಈ ವರ್ಷ ರೈತರು ಬದುಕುವುದು ತುಂಬಾ ಕಷ್ಟ. ಲೋಕಾಸಭೆ ಚುನಾವಣೆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟು ದರ ಇತ್ತು, ರೈತರಿಗೆ ಎಷ್ಟು ಶೋಷಣೆಯಾಗಿದೆ ಎಂಬುದು ಗೊತ್ತಾಗುತ್ತದೆ" ಎಂದರು.
"ರೈತರು ಇಂತಹ ಕಷ್ಟದ ಸಮಯದಲ್ಲಿ ನಮಗೆ ಸಹಕಾರ ನೀಡಿದ್ದಾರೆ. ಅವರ ಕಬ್ಬಿನ ಬಾಕಿ ಎಷ್ಟೇ ಇರಲಿ, ಅದನ್ನು ಕೊಡಿಸುವುದು ನನ್ನ ಜವಾಬ್ದಾರಿಯಾಗಿದ್ದು, ಕೊಡಿಸುತ್ತೇನೆ" ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್ಗೆ ನೀಡಿದ್ದ ಅರಣ್ಯ ಪ್ರದೇಶ ವಾಪಸ್ ಪಡೆಯಲಾಗುವುದು: ಸಚಿವ ಈಶ್ವರ ಖಂಡ್ರೆ