ಬೆಳಗಾವಿ : ಯಾವುದೇ ರೈತರು ಇಂತಹ ಕಾರ್ಖಾನೆಯವರು ತೂಕದಲ್ಲಿ ಮೋಸ ಮಾಡಿದ್ದಾರೆ ಎಂದು ದೂರು ಕೊಟ್ಟರೆ ಅಂಥವರಿಗೆ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಘೋಷಿಸಿದರು.
ಅವರು ಬೆಳಗಾವಿ ಸುವರ್ಣ ವಿಧಾನಸೌಧದ ಪಕ್ಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಂದ ಮನವಿ ಪತ್ರ ತೆಗೆದುಕೊಂಡ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಕೆಲವು ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಮೋಸ ಮಾಡುತ್ತಾರೆ ಎಂದು ದೂರುಗಳು ಕೇಳಿ ಬರುತ್ತಿವೆ. ಆದರೆ ರೈತರು ಹೆದರಿ ದೂರು ನೀಡುತ್ತಿಲ್ಲ. ಆ ದೂರು ನಿಜವಾದರೆ ಆ ರೈತರಿಗೆ ಸರ್ಕಾರದ ಪರವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ನೀಡಲಾಗುವುದು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹೆದರುವ ಅಗತ್ಯವಿಲ್ಲ, ನಮ್ಮ ಇಲಾಖೆಯಿಂದ ಅವರು ಬೆಳೆದ ಕಬ್ಬನ್ನು ಕಾರ್ಖಾನೆಗಳಿಗೆ ಸರಬರಾಜು ಮಾಡಲಾಗುವುದು. ಯಾವುದೇ ಕಾರಣಕ್ಕೂ ರೈತರು ಹೆದರಬೇಡಿ ಎಂದು ಅನ್ನದಾತರಿಗೆ ಧೈರ್ಯ ತುಂಬಿದರು.
ಕಬ್ಬು ಬೆಳೆಗಾರರು ನಿರಂತರವಾಗಿ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಶಾಶ್ವತ ಪರಿಹಾರ ಇಲ್ಲವೇ? ಎಂಬ ಪ್ರಶ್ನೆಯ ಕುರಿತು ಮಾತನಾಡಿದ ಸಚಿವರು, ಹೋರಾಟ ಎಂಬುದು ಒಂದು ನಿರಂತರ ಪ್ರಕ್ರಿಯೆ. ರೈತರಿಗೆ ಒಳ್ಳೆಯ ಬೆಲೆ ಸಿಕ್ಕರೆ ರೈತರು ಪ್ರತಿಭಟನೆ ಮಾಡುವುದಿಲ್ಲ. ಒಳ್ಳೆಯ ದರ ನೀಡುವ ನಿರ್ಣಯವನ್ನು ಕೇಂದ್ರ ಸರ್ಕಾರ ಮಾಡಬೇಕು. ಕೇಂದ್ರ ಸರ್ಕಾರ ಎಂಎಸ್ಸಿ ಜಾರಿ ಮಾಡಬೇಕಿತ್ತು. ರೈತರಿಗೆ ಬೆಲೆ ನಿಗದಿ ಆದಷ್ಟು ಬೇಗನೆ ಸಿಗಲಿ. ಕೇಂದ್ರ ಮತ್ತು ರಾಜ್ಯದಿಂದ ಕೂಡಿ ಆಗಲಿ ಎಂಬುದು ನನ್ನ ಆಶಯ. ಇದರಿಂದ ಪ್ರತಿಭಟನೆ ಎಂಬುದು ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ನಿಮ್ಮ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಅವ್ಯವಹಾರ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಂದಿ ಸಕ್ಕರೆ ಕಾರ್ಖಾನೆ ದೇಶದಲ್ಲಿ ಮಾದರಿ ಸಕ್ಕರೆ ಕಾರ್ಖಾನೆ. ಇತಿಹಾಸದಲ್ಲಿ ಮೊದಲ ಬಾರಿಗೆ ಇವತ್ತು 60 ಕೋಟಿ ರೂ. ಅವ್ಯವಹಾರ ನಡೆದಿದೆ. ಈ ರೀತಿ ಅವ್ಯವಹಾರ ನಡೆಸಬಾರದು. ಸಂಸ್ಥೆಗಳು ಎಂಬುದು ಹಾಲು ಕೊಡುವ ಹಸು ಇದ್ದಂತೆ. ಹಾಲು ಕೊಡುತ್ತದೆ ಎಂದು ಕೆಚ್ಚಲು ಕೊಯ್ಯಬಾರದು ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ತ್ಯಾಜ್ಯದ ನೀರು ಹರಿಸಿದರೆ ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ರೈತರು ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಗಳ ಮಾಲೀಕನಿಗೆ ಹೆದರುವ ಅಗತ್ಯವಿಲ್ಲ ಎಂದು ಮತ್ತೊಮ್ಮೆ ರೈತರಿಗೆ ಧೈರ್ಯದ ಮಾತುಗಳನ್ನು ಸಚಿವ ಶಿವಾನಂದ ಪಾಟೀಲ ಹೇಳಿದರು.