ಬೆಂಗಳೂರು: ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವ ರಾಜ್ಯದ ನರ್ಸಿಂಗ್ ಕಾಲೇಜುಗಳನ್ನು ತಪಾಸಣೆ ನಡೆಸಿ ಬೀಗ ಜಡಿಯಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆದ ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ನಿದೇರ್ಶನ ನೀಡಿದರು.
ರಾಜ್ಯದ ಸುಮಾರು ನರ್ಸಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ತಪಾಸಣೆ ನಡೆಸಿ ಅಂತಹ ಕಾಲೇಜುಗಳಿಗೆ ಬೀಗ ಹಾಕಿ ಎಂದು ಸ್ಥಳದಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್ ಅವರಿಗೆ ಸೂಚನೆ ನೀಡಿದರು.
ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಸರ್ಕಾರ ಕೂಡ ಮಾನವೀಯ ದೃಷ್ಟಿಯಿಂದ ನಡೆದುಕೊಂಡಿದೆ. ಇಷ್ಟಾದರೂ ಬುದ್ಧಿ ಬಂದಿಲ್ಲ ಅಂದರೆ ಹೇಗೆ? ಎಂದು ಆಡಳಿತ ಮಂಡಳಿಯವರ ವರ್ತನೆಗೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೋಧಕ, ಬೋಧಕೇತರ, ಪ್ರಯೋಗಾಲಯ, ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವ ಶಿಕ್ಷಣ ಕೊಡುತ್ತಾರೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವ ವೇಳೆ ಆಶ್ವಾಸನೆಗಳನ್ನು ನೀಡಿ ಅವರಿಂದ ಹೆಚ್ಚಿನ ಶುಲ್ಕ ಪಡೆಯುತ್ತೀರಿ. ಕನಿಷ್ಠ ಪಕ್ಷ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಇದು 'ರಕ್ತದಾನಿಗಳ ಗ್ರಾಮ'ವೆಂದೇ ಪ್ರಸಿದ್ಧಿ; ಇಲ್ಲಿನ ಪ್ರತಿ ಮನೆಯಲ್ಲೂ ಇದ್ದಾರೆ ದಾನಿಗಳು - WORLD BLOOD DONOR DAY 2024
ಇನ್ನು ಮುಂದೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶ ಮಾಡಿಕೊಳ್ಳುವ ಮುನ್ನ ಅಧಿಕಾರಿಗಳು ಪ್ರತಿಯೊಂದು ಕಾಲೇಜುಗೆ ಭೇಟಿ ನೀಡಬೇಕು. ಯಾವ ಕಾಲೇಜು ಸರ್ಕಾರದ ಮಾನದಂಡ ಪಾಲನೆ ಮಾಡಿರುವುದಿಲ್ಲವೋ, ಅಂತಹ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಶುಲ್ಕ ಪರಿಷ್ಕರಣೆ ಇಲ್ಲ: ಇದೇ ವೇಳೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ವತಿಯಿಂದ ಶುಲ್ಕ ಪರಿಷ್ಕರಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತು. ಇದಕ್ಕೆ ಸಚಿವ ಪಾಟೀಲ್, ಯಾವುದೇ ಕಾರಣಕ್ಕೂ ವಾರ್ಷಿಕ ಶುಲ್ಕವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಕೋಟದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ ವಾರ್ಷಿಕ 10,000 ರೂ, ಆಡಳಿತ ಮಂಡಳಿಯ ವಿದ್ಯಾರ್ಥಿ 1 ಲಕ್ಷ ಹಾಗೂ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ 1.40 ಲಕ್ಷ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ಶೇ.20 ರಷ್ಟು ಪರಿಷ್ಕರಣೆ ಮಾಡಬೇಕು ಎಂಬುದು ಸಂಘದ ಬೇಡಿಕೆಯಾಗಿತ್ತು. ಆದರೆ, ಇದನ್ನು ಒಪ್ಪದ ಸಚಿವರು, ಸಾಧ್ಯವಾದರೆ ಈಗಿರುವ ಶುಲ್ಕವನ್ನೇ ಕಡಿಮೆ ಮಾಡಲಾಗುವುದು. ನಾವು ಯಾವಾಗಲೂ ವಿದ್ಯಾರ್ಥಿಗಳ ಪರ ಎಂದು ಸಚಿವರು ತಿಳಿಸಿದರು.
ಶೇ.40 ರಷ್ಟು ಸೀಟುಗಳನ್ನು ಬಿಡಿ: ಇನ್ನು ಸಭೆಯಲ್ಲಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸರ್ಕಾರಿ ಕೋಟಾದ ನರ್ಸಿಂಗ್ ಸೀಟುಗಳ ಪ್ರಮಾಣವನ್ನು ಶೇ.40 ರಷ್ಟು ಬಿಟ್ಟು ಕೊಡಿ ಎಂದು ಆಡಳಿತ ಮಂಡಳಿಯವರಿಗೆ ಸಲಹೆ ಮಾಡಿದರು. ಪ್ರಸ್ತುತ 611 ನರ್ಸಿಂಗ್ ಕಾಲೇಜು ವತಿಯಿಂದ ಒಟ್ಟು 35,000 ಸೀಟುಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಶೇ.20 ರಷ್ಟು ಸರ್ಕಾರಿ ಹಾಗೂ ಶೇ.80 ರಷ್ಟು ಆಡಳಿತ ಮಂಡಳಿಯವರು ತುಂಬಿಕೊಳ್ಳುತ್ತಾರೆ. ಶೇ.40 ರಷ್ಟು ಕೋಟಾವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಮನವಿ ಮಾಡಿದರು.
ಇನ್ನು ನರ್ಸಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಸೆಪ್ಟೆಂಬರ್ ತಿಂಗಳಿನಿಂದ ಆಕ್ಟೋಬರ್ವರೆಗೂ ನಡೆಸದೆ, ಇದೇ ಶೈಕ್ಷಣಿಕ ವರ್ಷದಿಂದ ಜುಲೈ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸಚಿವ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಸೀನ್, ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟರ್ ಪಿ.ಆರ್.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬಸ್ ಸ್ಟ್ಯಾಂಡ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶೀಘ್ರದಲ್ಲೇ 'ನಮ್ಮ ಕ್ಲಿನಿಕ್' ಪ್ರಾರಂಭ - Namma Clinics