ಧಾರವಾಡ: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನಗರದ ಸೈದಾಪುರದ ಸಮಾಜ ಕಲ್ಯಾಣ ಇಲಾಖೆ ಮೆಟ್ರಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿನಿಯರ ಜೊತೆಗೆ ಕುಳಿತು ಊಟ ಮಾಡಿದರು. ಗ್ರಂಥಾಲಯ, ಓದುವ ಕೊಠಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕುರಿತು ಪರಿಶೀಲಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರೊಂದಿಗೆ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಸಚಿವರು, ನೇರವಾಗಿ ಅಡುಗೆ ಕೋಣೆಗೆ ಭೇಟಿ ನೀಡಿ, ಆಹಾರ ತಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ, ರುಚಿ ನೋಡಿದರು. ನಂತರ ಊಟದ ಸಭಾಂಗಣದಲ್ಲಿ ವಸತಿನಿಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ಮಾಡಿ, ಅವರ ಓದು, ಹಾಸ್ಟೆಲ್ ಸೌಲಭ್ಯ, ಇಲಾಖೆ ಅಧಿಕಾರಿಗಳು ತೋರುವ ಕಾಳಜಿ, ಆರೋಗ್ಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಬೇಡಿಕೆ ಅನುಸಾರ ವಸತಿನಿಲಯದ ಆಸಕ್ತ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಐಎಎಸ್, ಕೆಎಎಸ್ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.
ವಸತಿನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರು ಇಚ್ಚಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ತಿಳಿಸಿದರು.
ಜಿಲ್ಲೆಯ ಹಿರಿಯ ಅಧಿಕಾರಿಗಳು ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಸಾಧನೆಯ ಛಲ ಮತ್ತು ಆತ್ಮಗೌರದ ಬದುಕಿನ ಬಗ್ಗೆ ಪ್ರೇರಣೆ ನೀಡಬೇಕು. ಇಲಾಖೆ ಮುಖ್ಯಸ್ಥರು ವಸತಿ ನಿಲಯಗಳಿಗೆ ನಿರಂತರ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮೀಯ ಸ್ಪಂದನೆ ಬೆಳೆಸಬೇಕೆಂದು ತಿಳಿಸಿದರು.
ವಿದ್ಯಾರ್ಥಿನಿಯರು ಡಿಸಿ ದಿವ್ಯಪ್ರಭು ಅವರಂತ ಅಧಿಕಾರಿಗಳನ್ನು ಮಾದರಿಯಾಗಿ ಇಟ್ಟುಕೊಂಡು ಐಎಎಸ್, ಐಪಿಎಸ್ ಓದಿ, ಪಾಸ್ ಆಗುವ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಅನಿರೀಕ್ಷಿತವಾಗಿ ಅತಿಥಿಗಳಾಗಿ ಆಗಮಿಸಿದ್ದ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮನೆಯವರಂತೆ ಆತ್ಮೀಯ ಕ್ಷಣಗಳನ್ನು ಕಳೆದ ವಿದ್ಯಾರ್ಥಿನಿಯರು ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು.
ಊಟದ ಸವಿದ ಸಚಿವ ಸಂತೋಷ್ ಲಾಡ್: ವಿದ್ಯಾರ್ಥಿನಿಯರೊಂದಿಗೆ ಸಚಿವ ಸಂತೋಷ್ ಲಾಡ್, ಡಿಸಿ ದಿವ್ಯ ಪ್ರಭು ಮತ್ತು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು, ಚಪಾತಿ, ಸವತಿಕಾಯಿ ಪಲ್ಲೆ, ಅನ್ನ ಸಾಂಬರ್ ಸವಿದರು. ಊಟದ ನಂತರ ವಿದ್ಯಾರ್ಥಿಗಳಿಗೆ ಬಾಳೆಹಣ್ಷು ನೀಡಲಾಯಿತು. ವಿದ್ಯಾರ್ಥಿನಿಯರ ವಸತಿ ನಿಲಯದ ಅಚ್ಚುಕಟ್ಟು, ಸ್ವಚ್ಛತೆ, ವಿದ್ಯಾರ್ಥಿನಿಯರ ಶಿಸ್ತು ನೋಡಿ, ಸಚಿವರು ಗುಡ್ ಎಂದರು. ಈಗಾಗಲೇ ಜಿಲ್ಲೆಗೆ ಅನುಮತಿ ನೀಡಿರುವ ಹೊಸ ವಸತಿ ನಿಲಯಗಳನ್ನು ಶೀಘ್ರವೇ ಆರಂಭಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಚಿವರ ಭೇಟಿ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ, ಜಿಲ್ಲಾ ಕಚೇರಿ ವ್ಯವಸ್ಥಾಪಕಿ ಮೀನಾಕ್ಷಿ ಚಂಚನೂರ, ವಾರ್ಡನ್ ಗೀತಾ ಇದ್ದರು. ಭೇಟಿಯಿಂದ ಖುಷಿಯಾದ ವಿದ್ಯಾರ್ಥಿನಿಯರು ಸಾಮೂಹಿಕ ಚಪ್ಪಾಳೆ ಮೂಲಕ ಸಚಿವರನ್ನು ಹಾಗೂ ಜಿಲ್ಲಾಧಿಕಾರಿಗಳನ್ನು ಬೀಳ್ಕೊಟ್ಟರು
ಡೆಂಗ್ಯೂ ಜ್ವರ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಸಚಿವ ಭೇಟಿ: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆ ಮುಂಭಾಗದಲಿಯೇ ಭೇಟಿಯಾಗುವ ರೋಗಿಗಳ ಆರೋಗ್ಯ ವಿಚಾರಿಸಿದ ಸಚಿವರು, ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಮತ್ತು ವ್ಯವಸ್ಥೆ ಯಾವ ರೀತಿ ಇದೇ ಎಂದು ಮಾತನಾಡಿಸಿದರು. ಅಲ್ಲಿದ್ದ ರೋಗಿಗಳು ಸಚಿವರಿಗೆ ಅಲ್ಲಿ ನೀಡುವ ಚಿಕಿತ್ಸೆ ಸರಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಡೆಂಗ್ಯೂ ಪ್ರತ್ಯೇಕ ವಾರ್ಡ್ಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಡಿಎಚ್ಒ ಶಶಿ ಪಾಟೀಲ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರು, ಸಚಿವ ಸಂತೋಷ್ ಲಾಡ್ಗೆ ಮಾಹಿತಿ ನೀಡಿದರು.
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ''ಡೆಂಗ್ಯೂಗೆ ಪ್ರತ್ಯೇಕ ವಾರ್ಡ್ ಮಾಡುವ ಸೂಚನೆ ಇತ್ತು. ಹೀಗಾಗಿ ಇಲ್ಲಿ ಪುರುಷ, ಮಹಿಳೆ, ಮಕ್ಕಳಿಗೆ ಪ್ರತ್ಯೇಕ ವಾರ್ಡ್ ಮಾಡಿದ್ದಾರೆ. ರಾಜ್ಯಕ್ಕೆ ಹೋಲಿಸಿದಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಿಗೆ ಇಲ್ಲ ಇಲ್ಲಿಯವರೆಗೆ 334 ಡೆಂಗ್ಯೂ ಪಾಸಿಟಿವ್ ಆಗಿವೆ. ಸ್ಯಾಂಪಲ್ ಟೆಸ್ಟ್ 1,700ಕ್ಕೂ ಹೆಚ್ಚಾಗಿವೆ. ಜನರ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ. ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿರುವವರ ಭೇಟಿ ಮಾಡಿದ್ವಿ ಅವರೆಲ್ಲರೂ ಗುಣಮುಖ ಆಗುತ್ತಿದ್ದಾರೆ. ಧಾರವಾಡದಲ್ಲಿ ಡೆಂಗ್ಯೂ ಕೇಸ್ ಯಾವುದು ಗಂಭೀರ ಸ್ಥಿತಿಯಲ್ಲಿಲ್ಲ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಾಲ್ಮೀಕಿ ಹಗರಣದಲ್ಲಿ ಸಿಎಂಗೂ ಎಸ್ಐಟಿ ನೋಟಿಸ್ ನೀಡಲಿ: ಪ್ರಲ್ಹಾದ್ ಜೋಶಿ - Union Minister Pralhad Joshi