ಧಾರವಾಡ: ಇವತ್ತಿನಿಂದ ಧಾರವಾಡ ಕ್ಷೇತ್ರದಲ್ಲಿ ನಮ್ಮ ಅಧಿಕೃತ ಪ್ರಚಾರ ಆರಂಭವಾಗಿದೆ. 10 ವರ್ಷ ಮೋದಿ ಹೇಳಿದ ಸುಳ್ಳುಗಳಿವೆ, ಅದನ್ನು ಜನರಿಗೆ ತಿಳಿಸುತ್ತೇವೆ. ನಾವು ಮಾಡಿದ ಕಾರ್ಯಕ್ರಮಗಳ ಬಗ್ಗೆ ಹೇಳುತ್ತೇವೆ. 70 ವರ್ಷದ ಇತಿಹಾಸ ಹೇಳುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಮನೆ ಮನೆಗೆ ಹೋಗಿ ಹೇಳುತ್ತೇವೆ. ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಯುವ ನಾಯಕ ರಜತ್ ಸಹ ಟಿಕೆಟ್ ಕೇಳಿದ್ದರು. ಆಕಾಂಕ್ಷಿಗಳೆಲ್ಲ ಒಪ್ಪಿ ವಿನೋದ ಅಸೂಟಿ ಪರ ಬಂದಿದ್ದಾರೆ. ಒಂದು ಈ ಬಾರಿ ಸರಪ್ರೈಸ್ ಫಲಿತಾಂಶ ಬರುತ್ತದೆ. ಎಲ್ಲರೂ ಜವಾಬ್ಧಾರಿ ವಹಿಸಿ ಕೆಲಸ ಮಾಡುತ್ತೇವೆ. ಕಾರ್ಯಕರ್ತರು, ಮುಖಂಡರು ಸೇರಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಎದುರಾಳಿ ಅಭ್ಯರ್ಥಿ ಬಹಳ ಸಲ ಗೆದ್ದವರು, ಕಳೆದ ನಾಲ್ಕು ಸಲ ಜಯ ಸಾಧಿಸಿದ್ದಾರೆ. ಹೀಗಾಗಿ ಅವರ ಬಗ್ಗೆ ನಾವು ಗೇಲಿ ಮಾಡುವುದಿಲ್ಲ. ಆದರೆ ಈಗ ಇರುವ ಪರಿಸ್ಥಿತಿ ಬೇರೆ ಇದೆ ಎಂದರು.
ಮೋದಿ, ಜೋಶಿಯವರಿಗೆ ವ್ಯಕ್ತಿಗತವಾಗಿ ಬೈದಿಲ್ಲ: ನನಗೆ ಮೋದಿ ಬೈಯಲಿಕ್ಕೆ ಅಂತಾನೆ ಇಟ್ಟಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಲ್ಲಿಯವರೆಗೆ ನಾನು ಮೋದಿಯವರನ್ನು ವೈಯಕ್ತಿಕವಾಗಿ ಬೈದಿಲ್ಲ. ಮೋದಿ ಮತ್ತು ಜೋಶಿಯವರಿಗೆ ವ್ಯಕ್ತಿಗತವಾಗಿ ಬೈದಿಲ್ಲ. ಆ ಮಟ್ಟಕ್ಕೆ ನಾನು ಬೆಳೆದಿಲ್ಲ. ರಾಜಕೀಯ ಜೀವನದಲ್ಲಿ ವೈಯಕ್ತಿಕವಾಗಿ ಬೈದಿಲ್ಲ. ನಾವು ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಆಗಿಲ್ಲ. ಹೀಗಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಪ್ರಮುಖರ ಸಭೆ ಮಾಡುತ್ತಿದ್ದೇವೆ, ಸಂಘಟಿತವಾಗಿ ಕೆಲಸ ಮಾಡಲು ಚರ್ಚೆ ನಡೆಸಿದ್ದೇವೆ ಎಂದು ಲಾಡ್ ಹೇಳಿದರು.
ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಮುಖಂಡರ ಸಲಹೆ ಪಡೆದು ಪಕ್ಷ ಟಿಕೆಟ್ ಕೊಟ್ಟಿದೆ. ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೆ ಕೊಡಬೇಕೆಂದು ನನಗೆ ಟಿಕೆಟ್ ಕೊಟ್ಟಿದೆ. ಎಲ್ಲೆಡೆ ಮೋದಿ ಅಲೆ ಇದೆ ಅಂತಾರೆ. 10 ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಆಗಿದೆ. ಮೋದಿ ನಮ್ಮ ರಾಜ್ಯಕ್ಕೆ ಬಂದು ಹೋಗಿದ್ದರು. ಆದರೂ ನಮ್ಮ ಪಕ್ಷ 135 ಸ್ಥಾನ ಗಳಿಸಿದೆ. ಜನರ ಆಶೀರ್ವಾದದಿಂದ ಸರ್ಕಾರ ಅಡಳಿತ ನಡೆಸುತ್ತಿದೆ ಎಂದರು.
ಧಾರವಾಡ ಕ್ಷೇತ್ರ ಬಿಜೆಪಿ ಭದ್ರಕೋಟೆ ವಿಚಾರಕ್ಕೆ ಮಾತನಾಡಿದ ಅವರು, ಮುಂಚೆ ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಜನ ಬದಲಾವಣೆ ಬಯಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಣಾಮವೂ ಆಗಲಿದೆ. ಆಶ್ವಾಸನೆಯಂತೆ ಗ್ಯಾರಂಟಿ ನಡೆಸಿಕೊಟ್ಟಿದ್ದೇವೆ. ಚುನಾವಣೆ ವೇಳೆ ಅನೇಕರು ಸುಳ್ಳು ಅಶ್ವಾಸನೆ ಕೊಟ್ಟಿದ್ದಾರೆ. ಆದರೆ ನಮ್ಮ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ ಎಂದರು.
ಧಾರವಾಡ ಕ್ಷೇತ್ರದ ಜನರು ಪ್ರಜ್ಞಾವಂತರು: ಮೂರು ಲಕ್ಷ ಅಂತರದಿಂದ ಗೆಲ್ಲುವೆನೆಂದು ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಲೀಡ್ ಎಷ್ಟೇ ಹೇಳಬಹುದು. ಆದರೆ ಅದು ಕ್ಷೇತ್ರದ ಜನರ ಕೈಯಲ್ಲಿದೆ. ಅಷ್ಟು ವಿಶ್ವಾಸದಿಂದ ಹೇಳುತ್ತಿದ್ದಾರೆ ಅಂದ್ರೆ ಇವಿಎಂ ಗದ್ದಲ ಏನಾದರು ಮಾಡಬಹುದು. ಧಾರವಾಡ ಕ್ಷೇತ್ರದ ಜನರು ಪ್ರಜ್ಞಾವಂತರಿದ್ದಾರೆ ಎಂದರು.
ಮೊದಲು ನಾನು ಟಿಕೆಟ್ಗೆ ಅರ್ಜಿ ಹಾಕಿರಲಿಲ್ಲ, ಬಳಿಕ ಕೆಪಿಸಿಸಿ ಅಧ್ಯಕ್ಷರ ಮೂಲಕ ಅರ್ಜಿ ಹಾಕಿದ್ದೆನು. ನಾಯಕರ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡುವವರು ಒಂದೇ ಸಮಾಜದಿಂದ ಗೆಲ್ಲಲು ಆಗುವುದಿಲ್ಲ. ಕಾಂಗ್ರೆಸ್ ಎಲ್ಲ ಸಮುದಾಯಗಳನ್ನು ನೋಡುತ್ತದೆ. ಹೀಗಾಗಿ ಎಲ್ಲ ಸಮುದಾಯದವರು ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದು ಅಭ್ಯರ್ಥಿ ಅಸೂಟಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:28ಕ್ಕೆ 28 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ - B S YEDIYURAPPA