ಚಾಮರಾಜನಗರ: ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಬಹಳ ಹಿಂದಿನಿಂದಲೂ ಪ್ರಸ್ತಾವನೆ ಇತ್ತು. ಜನರ ಒತ್ತಾಯವೂ ಇತ್ತು. ಅದರಂತೆ ಪ್ರಾಧಿಕಾರ ಮಾಡಿದ್ದೇವೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಾಧಿಕಾರ ಸಂಬಂಧ ರಾಜಮನೆತನದವರು ಕೋರ್ಟ್ ಮೇಟ್ಟಿಲೇರಿದ್ದಾರೆ. ಕೋರ್ಟ್ನಲ್ಲಿ ಈಗ ಸ್ಟೇಟಸ್ ಕೋ ಇದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ದಹನ ಮಾಡಿ ಅವಮಾನ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯಪಾಲರಿಗೆ ಅವಮಾನ ಮಾಡುವ ಕೆಲಸ ನಮ್ಮ ಮಂತ್ರಿಗಳಾಗಲಿ, ಕಾರ್ಯಕರ್ತರಾಗಲಿ ಮಾಡಿಲ್ಲ. ಬಿಜೆಪಿಯವರೇ ಮಾಡಿ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಪಾಲರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ ಎಂದು ನಮ್ಮವರು ಹೇಳಿದ್ದಾರೆ ಅಷ್ಟೇ. ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿದ್ದರೆ ಅದು ತಪ್ಪು. ಈ ಕೆಲಸ ಯಾರೇ ಮಾಡಿದ್ದರೂ ತಪ್ಪು. ಪ್ರಧಾನಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ರಾಜಕೀಯ ನಾಯಕರ ಪ್ರತಿಕೃತಿ ದಹನ ಸಾಮಾನ್ಯ. ರಾಜ್ಯಪಾಲರು ಮಾಡಿದ ತಪ್ಪನ್ನು ಎತ್ತಿ ತೋರಿಸುವುದರಲ್ಲಿ ತಪ್ಪೇನು ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ: ಮೊದಲ ಹಂತದ ಗಜಪಯಣಕ್ಕೆ ಸಚಿವರಿಂದ ಚಾಲನೆ - Flagged off to Gajapayan