ಕಲಬುರಗಿ : ನನ್ನನ್ನು ಮತ್ತು ನನ್ನ ಕುಟುಂಬವನ್ನು ಮುಗಿಸುವುದಾಗಿ ಹತ್ತು ದಿನಗಳ ಹಿಂದೆ ಲೆಟರ್ ಬಂದಿದೆ. ಆ ಲೆಟರ್ನಲ್ಲಿ ನನ್ನ ಜಾತಿ ಹಿಡಿದು ನಿಂದಿಸಿ ಬರೆದಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನಾಮಧೇಯ ಪತ್ರದಲ್ಲಿನ ಸಾರಾಂಶ ಬಿಚ್ಚಿಟ್ಟಿದ್ದಾರೆ. ಬಿಜೆಪಿ ನಮ್ಮ ಕುಟುಂಬದ ಮೇಲೆ ಪದೇ ಪದೆ ವೈಯಕ್ತಿಕ ದಾಳಿ ನಡೆಸುತ್ತಿದೆ. ಇಡೀ ದಲಿತ ಸಮುದಾಯಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಆರೋಪ ಮಾಡಿದ್ರು. ಈ ಪತ್ರಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು. ಈ ಪತ್ರ ಕಲಬುರಗಿಯಿಂದಲೇ ಬೆಂಗಳೂರಿನ ವಿಕಾಸಸೌಧದ ನನ್ನ ಕಚೇರಿಗೆ ಪೋಸ್ಟ್ ಮಾಡಲಾಗಿದೆ. ಅನಾಮಧೇಯ ಪತ್ರದ ಬಗ್ಗೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ ಕೂಡಾ ದಾಖಲಿಸಿದ್ದಾಗಿ ಹೇಳಿದರು.
''ಚುನಾವಣೆ ಗೆಲ್ಲೋಕೆ ನನ್ನ ಹೆಣ ಬೀಳಿಸೋಕು ಕೂಡಾ ಬಿಜೆಪಿಯವರು ಸಿದ್ಧರಿದ್ದಾರೆ. ಆದರೆ ನಾನು ಸಂವಿಧಾನದ ಮೇಲೆ ನಂಬಿಕೆ ಇಟ್ಟವನು. ಸಂವಿಧಾನದ ಮೂಲಕವೇ ಅವರಿಗೆ ಉತ್ತರ ಕೊಡುತ್ತೇನೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉತ್ತರ ಭಾರತದಿಂದ ಜೀವ ಬೆದರಿಕೆ ಬಂದಿತ್ತು. ತಡರಾತ್ರಿ ಕಾಲ್ ಮಾಡಿ, ನಿನ್ನನ್ನು ಮತ್ತು ನಿಮ್ಮ ಕುಟುಂಬವನ್ನ ಮುಗಿಸ್ತಿನಿ ಎಂದು ಧಮ್ಕಿ ಹಾಕಲಾಗಿತ್ತು. ಈ ಬಗ್ಗೆ ಅಂದಿನ ಗೃಹ ಸಚಿವರಿಗೆ ದೂರು ಕೊಟ್ರೆ ಯಾವುದೇ ಪ್ರಯೋಜನ ಆಗ್ಲಿಲ್ಲ'' ಎಂದು ಖರ್ಗೆ ಆರೋಪಿಸಿದರು.
''ಭ್ರಷ್ಟಾಚಾರ ಕುರಿತಾಗಿ ನಾನು ಕೇಳಿದ ಪ್ರಶ್ನೆಗಳಿಗೆ ಬಿಜೆಪಿಯವರು ಯಾವತ್ತೂ ಉತ್ತರ ಕೊಡಲಿಲ್ಲ. ಹೇ ನೀನೊಬ್ಬನೇನ ಎಲ್ಲದಕ್ಕೂ ಮಾತನಾಡೋನು ಅಂತಾ ಬಿಜೆಪಿಯವರು ಕೇಳ್ತಾರೆ. ಹೌದು, ನನಗೆ ಎಲ್ಲದರ ಬಗ್ಗೆ ಮಾತನಾಡಲು ಪಕ್ಷದಿಂದ ಜವಾಬ್ದಾರಿ ನೀಡಿದ್ದಾರೆ. ನಾನು ಸರ್ಕಾರದ/ಪಕ್ಷದ ಸ್ಪೋಕ್ಸ್‌ಮ್ಯಾನ್ ಆಗಿದ್ದೇನೆ'' ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
''ನಾನು ಗಂಡೋ ಹೆಣ್ಣೋ ಅಂತಾ ಸಂಸದ ಪ್ರತಾಪ್‌ಸಿಂಹ ಪ್ರಶ್ನೆ ಮಾಡ್ತಾರೆ. ಪಿಎಸ್‌ಐ ಹಗರಣದಲ್ಲಿ ನನ್ನನ್ನ ಮರಿ ಖರ್ಗೆ ಅಂತಾ ಜರಿದಿದ್ರು. ಡಾಲರ್ಸ್ ಕಾಲೋನಿಯಲ್ಲಿ ನಾನು ನಾಲ್ಕು ಪ್ರತಿಷ್ಠಿತ ಬಂಗಲೆ ಕಟ್ಟಿಸಿಕೊಂಡಿದ್ದೇನೆಂದು ಆರೋಪಿಸುತ್ತಾರೆ. ಆದರೆ ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಬಿಜೆಪಿಯ ಸುನೀಲ್‌ಕುಮಾರ್ ಅವರು, ಪ್ರಿಯಾಂಕ್ ಖರ್ಗೆ ಕಾನ್ವೆಂಟ್ ದಲಿತ ಎಂದು ಹೇಳಿದ್ದಾರೆ. ನಾನು ಕಾನ್ವೆಂಟ್ ದಲಿತನೋ, ಕಾನ್ಸಿಯಸ್ ದಲಿತನೋ ಅನ್ನೋದನ್ನು ತಿಳಿದುಕೊಳ್ಳಲಿ. ನನ್ನ ಜಾತಿ ಹಿಡಿದು ಮಾತಾಡ್ತಾರೆ. ಯಾಕೆ ದಲಿತರು ಕಾನ್ವೆಂಟ್‌ನಲ್ಲಿ ಓದಬಾರದಾ?'' ಎಂದು ಮಾಜಿ ಸಚಿವ ಸುನೀಲ್‌ಕುಮಾರ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಇದೇ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂತಹ ಕೆಟ್ಟ ಮಗ ಹುಟ್ಟಬಾರದೆಂದು ಮಾಜಿ ಸಚಿವ ಈಶ್ವರಪ್ಪ ಹೇಳ್ತಾರೆ. ನಿಮ್ಮ ಮಗನ ದೃಷ್ಟಿಯಲ್ಲಿ ನೀವು ಕೆಟ್ಟವರಾಗಿದ್ದೀರಿ ಈಶ್ವರಪ್ಪನವರೇ ಎಂದು ತಿರುಗೇಟು ನೀಡಿದ್ರು. ಬಿಜೆಪಿಯವರು ನಮ್ಮ ಮೇಲೆ ಕುಟುಂಬ ರಾಜಕಾರಣ ಎಂದು ಮುಗಿಬೀಳ್ತಾರೆ. ಬಿ.ವೈ ವಿಜಯೇಂದ್ರ, ಬಿ. ವೈ ರಾಘವೇಂದ್ರ ಯಾವ ರೈತ ಪರ ಹೋರಾಟ ಮಾಡಿದ್ದಾರೆ? ಇವರಿಗೆಲ್ಲ ಹೇಗೆ ಟಿಕೆಟ್ ಸಿಕ್ಕಿದೆ? ಇವರದು ಕುಟುಂಬ ರಾಜಕಾರಣ ಅಲ್ವ? ಎಂದು ಪ್ರಶ್ನೆ ಮಾಡಿದ್ರು.
''ಬಿಜೆಪಿಗೆ ಸೋಲಿನ ಆತಂಕ ಶುರುವಾಗಿದೆ. ಅದಕ್ಕಾಗಿ ದಿನಕ್ಕೊಂದು ಸುಳ್ಳು ಸೃಷ್ಟಿ ಮಾಡ್ತಿದ್ದಾರೆ. ಬಿಜೆಪಿಯೇ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದೆ. ಚುನಾವಣೆಯಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಹೊಂಚು ಹಾಕಿದೆ. ನನ್ನ ಹೆಣ ಬೀಳಿಸಿದ್ರು ಪರ್ವಾಗಿಲ್ಲ. ಆದರೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಿಜೆಪಿ ಪಣತೊಟ್ಟಿದೆ. ಐಟಿ/ಇಡಿ ಬಗ್ಗೆ ನನಗೆ ಭಯವಿಲ್ಲ, ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ದಿನಾ ಐಟಿ/ಇಡಿಯಲ್ಲಿ ಕರೆದು ಕೂರಿಸುತ್ತಾರೆ. ಅದ್ಯಾವುದೋ ಸ್ವಾತಂತ್ರ್ಯ ಪೂರ್ವದ ಪ್ರಕರಣ ತೆಗೆದು ಐಟಿ/ಇಡಿ ತನಿಖೆ ಮಾಡುತ್ತಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರೇ IT/ED/CBI'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕುಟುಕಿದರು.
ಇದನ್ನೂ ಓದಿ : ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿ: ಪ್ರಿಯಾಂಕ್ ಖರ್ಗೆ - Priyank Kharge