ಬೆಂಗಳೂರು: "ಮಾಜಿ ಸಚಿವ ಬಿ.ನಾಗೇಂದ್ರ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ಯಾವ ಆಧಾರದಲ್ಲಿ ದಾಳಿ ನಡೆಸಿದೆ ಎಂಬುದು ತಿಳಿದಿಲ್ಲ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ವಾಲ್ಮೀಕಿ ನಿಗಮ ಹಗರಣ ಸಂಬಂಧ ಎಸ್ಐಟಿ, ಬಿ.ನಾಗೇಂದ್ರ, ಬಸನಗೌಡ ದದ್ದಲ್ ಪಿಎಗಳು ಹೇಳಿಕೆ ಕೊಟ್ಟ ಆಧಾರದಲ್ಲಿ ವಿಚಾರಣೆ ಮಾಡಿದ್ದಾರೆ. ಇವತ್ತೂ ಅವರ ವಿಚಾರಣೆ ಮುಂದುವರೆಯಲಿದೆ. ಈ ಮಧ್ಯೆ ಇಡಿಯವರು ದಾಳಿ ಮಾಡಿದ್ದಾರೆ" ಎಂದರು.
"ದಾಳಿ ಬಗ್ಗೆ ಇಡಿಯವರಾಗಲೀ, ಸಿಬಿಐನವರಾಗಲೀ ರಾಜ್ಯ ಸರ್ಕಾರಕ್ಕೆ ತಿಳಿಸಲ್ಲ. ಅವರು ದಾಳಿ ಮಾಡುವ ಕೆಲಸ ಮಾಡಿದ್ದಾರೆ. ಅದು ಅವರ ಕೆಲಸ. ಇದರಿಂದ ಸರ್ಕಾರಕ್ಕೆ ಮುಜುಗರ ಆಗಿದೆ ಅನ್ನುವ ಪ್ರಶ್ನೆ ಬರಲ್ಲ. ಇಡಿ ದಾಳಿಯಿಂದ ವಾಲ್ಮೀಕಿ ನಿಗಮದ ಅವ್ಯವಹಾರದಲ್ಲಿ ನಾಗೇಂದ್ರ ಹಾಗೂ ದದ್ದಲ್ ಅವರ ಪಾತ್ರವಿದೆ ಎಂತ ನಾವು ಊಹೆ ಮಾಡುವುದಕ್ಕೆ ಆಗುವುದಿಲ್ಲ" ಎಂದರು.
ಪ್ರಕರಣ ಸಂಬಂಧ ಪದ್ಮನಾಭ್, ಪರಶುರಾಮ್ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, "ಎಸ್ಐಟಿ ತನಿಖೆ ನಡೆಯುತ್ತಿದೆ. ಆ ಭಾಗದಲ್ಲಿ ಸಿಬಿಐನವರು ಬ್ಯಾಂಕ್ ವಂಚನೆಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇಲ್ಲಿ ಎಸ್‌ಐಟಿನವರು ತನಿಖೆ ಮಾಡ್ತಿದ್ದಾರೆ. ಈ ಮಧ್ಯೆ ಸಾರ್ವಜನಿಕರ ಗಮನಕ್ಕೆ ಬರುವ ಮಾಹಿತಿಗಳನ್ನು ಕೂಡ ಎಸ್ಐಟಿನವರೂ ಗಮನಿಸುತ್ತಿದ್ದಾರೆ" ಎಂದು ಹೇಳಿದರು.
ನೇಹಾ ಹಿರೇಮಠ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಲವ್ ಜಿಹಾದ್ ಉಲ್ಲೇಖ ಮಾಡದ ವಿಚಾರವಾಗಿ ಮಾತನಾಡಿ, "ತನಿಖೆಯಲ್ಲಿ ಏನು ಮಾಹಿತಿ ಬರುತ್ತೋ ಆ ಆಧಾರದಲ್ಲಿ ಚಾರ್ಜ್‌ಶೀಟ್ ಹಾಕಿರುತ್ತಾರೆ. ಬಿಜೆಪಿಯವರೋ, ನಾನೋ, ಇನ್ಯಾರೋ ಹೇಳಿದ ಹಾಗೇ ಚಾರ್ಜ್‌ಶೀಟ್ ಮಾಡಲು ಆಗಲ್ವಲ್ಲಾ? ತನಿಖೆಯಲ್ಲಿ ಸಾಕ್ಷಿಗಳನ್ನಾಧರಿಸಿ ಏನು ಮಾಹಿತಿ ಬಂದಿದೆಯೋ ಅದರಂತೆ ಹಾಕಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
"ನೇಹಾ ಅವರ ತಂದೆಯೂ ಅದರ ಬಗ್ಗೆ ಹೇಳಿರಬಹುದು. ಇದನ್ನೂ ತನಿಖೆ ಮಾಡುವವರು ಗಮನದಲ್ಲಿಟ್ಟುಕೊಂಡು ಪರಿಶೀಲನೆ ಮಾಡಿರುತ್ತಾರೆ. ಪರಿಶೀಲನೆಯಿಂದ ಹೌದೋ ಅಲ್ಲವೋ ಅಂತ ತೀರ್ಮಾನ ಮಾಡಿ ಚಾರ್ಜ್‌ಶೀಟ್ ಹಾಕಿರುತ್ತಾರೆ" ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆಯೇ ಸೋಲಿಗೆ ಕಾರಣ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಫ್ಯಾಕ್ಟ್ ಪೈಂಡಿಂಗ್ ಕಮಿಟಿ ಮಾಡಲಾಗಿದೆ. ಇವತ್ತು ಕಮಿಟಿವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಏನು ಫೈಂಡ್ ಔಟ್ ಮಾಡ್ತಾರೆ ನೋಡೋಣ. ಬಿ.ಕೆ.ಹರಿಪ್ರಸಾದ್ ಅವರನ್ನೂ ಕೂಡ ಕರೆದು ಅಭಿಪ್ರಾಯ ಕೇಳಬಹುದು. ಅವರ ಹೇಳಿಕೆಯನ್ನೂ ಕೂಡ ಗಮನಿಸುತ್ತಾರೆ" ಎಂದರು.
ಮುಡಾ ಸೈಟ್ ವಿಚಾರದಲ್ಲಿ ಸಿಎಂ ಸುಳ್ಳು ಹೇಳಿದ್ದಾರೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಮಾತನಾಡಿ, "ಅವರು ನಾಲ್ಕು ವರ್ಷ ಇದ್ರಲ್ಲಾ, ಏನು ಮಾಡಿದ್ರು? ಅವರು ಯಾವ ರೀತಿ ಆಡಳಿತ ಮಾಡಿದರು ಅಂತ ನೋಡಿಯೇ ನಮಗೆ ಜನ 136 ಸ್ಥಾನ ಕೊಟ್ಟಿದ್ದಾರೆ. ಅವರು ಆಡಳಿತದಿಂದ ಇಳಿದ ಬಳಿಕ, ಹಾಗೆ ಇರಬೇಕು ಹೀಗೆ ಆಡಳಿತ ಮಾಡಬೇಕು ಅಂದ್ರೆ ಹೇಗೆ? ನಾವು ಜನರ ನಿರೀಕ್ಷೆಯಂತೆ ಆಡಳಿತ ಮಾಡುತ್ತಿದ್ದೇವೆ" ಎಂದರು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಅಕ್ರಮ: ಮಾಜಿ ಸಚಿವ ಬಿ.ನಾಗೇಂದ್ರ, ಬಸವನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ - Valmiki Nigam Scam