ಬೆಳಗಾವಿ: "ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರ ಕನ್ನಡ ಮಾಧ್ಯಮಗಳ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ, ರಾಜ್ಯದಲ್ಲಿ ಮಕ್ಕಳಿಗೆ ಕೊಡುವಂತಹ ಯೋಜನೆಗಳನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳ ಮಕ್ಕಳಿಗೆ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಮಹಾರಾಷ್ಟ್ರ ಸರ್ಕಾರ ಇದನ್ನು ಮಾಡಿದರೆ ಒಳ್ಳೆಯದು. ನಾವು ಒಬ್ಬರಿಗೆ ಕೊಡೋದು ಎಷ್ಟು ಸರಿ ಎನ್ನುವುದು ಯೋಚಿಸಿ ನೋಡಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ. ಮಕ್ಕಳಿಗೆ ಶೂಗಳನ್ನು ಕೊಡುವುದು ಒಳ್ಳೆಯದು. ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ ಅಂತಾದರೆ ನಾವು ಆ ಮಕ್ಕಳಿಗೆ ಶೂ ಹಾಗೂ ವಿವಿಧ ಯೋಜನೆಗಳನ್ನು ವಿತರಣೆ ಮಾಡುತ್ತೇವೆ" ಎಂದು ಘೋಷಿಸಿದರು.
"ವಿಜಯೇಂದ್ರ ಅವರಿಗೆ ಸಿಬಿಐ ಜೊತೆಗೆ ಅಡ್ಜಸ್ಟ್ಮೆಂಟಿಗೆ ಸರಿಯಾಗಿತ್ತು. ಹೀಗಾಗಿ ಅದೇ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖಾ ಸಂಸ್ಥೆಗೆ ಇರಬೇಕಾಗಿದ್ದ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ. ಇದರಿಂದ ವಿಜಯೇಂದ್ರ ಅವರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಕಾಂಗ್ರೆಸ್ ಇದ್ದಾಗ ಸಿಬಿಐ ತನಿಖೆಗೆ ಬೇಡ ಅಂತ ಇವರೇ ಹೇಳುತ್ತಿದ್ದರು." ಎಂದು ವಕ್ಫ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.
"ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿಗೆ ನೀಡಿದರೂ, ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ನನ್ನ ಉದ್ದೇಶವಾಗಿದೆ. ಬಿಜೆಪಿಯವರು ಅವರ ಹಣೆಬರಹಕ್ಕೆ ಸ್ವಂತ ಶಕ್ತಿಯ ಮೇಲೆ ಸರ್ಕಾರ ನಡೆಸಿಲ್ಲ. ಬಿಜೆಪಿಯವರದ್ದು ಎಲ್ಲ ಫ್ಲಾಪ್ ಶೋ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನಮ್ಮ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಸಿದ್ಧವಿದೆ. ಎಲ್ಲರೂ ನಿನ್ನೆಯಿಂದ ಮಾತನಾಡುತ್ತಿದ್ದಾರೆ. ಇವತ್ತು, ನಾಳೆಯೂ ಇದೇ ಚರ್ಚೆ ಮುಂದುವರೆಯುತ್ತದೆ. ವಿಧಾನಸಭೆಯಂತೆಯೇ ಪರಿಷತ್ನಲ್ಲೂ ಈ ಕುರಿತು ಚರ್ಚೆ ನಡೆಯಬೇಕು" ಎಂದು ಆಗ್ರಹಿಸಿದರು.
"ಉತ್ತರ ಕರ್ನಾಟಕ ಭಾಗದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದರೆ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಲ್ಲವಾದರೆ ಸುವರ್ಣ ಸೌಧ ಇದ್ದೂ ಏನೂ ಪ್ರಯೋಜನವಿಲ್ಲ ಎಂಬ ಮನಸ್ಥಿತಿ ಸೃಷ್ಟಿಯಾಗುತ್ತದೆ. ಸದನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು ಬಹಳಷ್ಟು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ. ಇಲ್ಲಿ ಚರ್ಚೆಯಾದ ವಿಷಯಗಳನ್ನು ನಾವು ಅನುಷ್ಠಾನಕ್ಕೆ ತರುವುದು ನಮ್ಮ ಸರ್ಕಾರದ ಗ್ಯಾರಂಟಿಯಾಗಿದೆ" ಎಂದು ಭರವಸೆ ನೀಡಿದರು.
"ನಿನ್ನೆ ಮಧ್ಯರಾತ್ರಿಯವರೆಗೂ ಸದನ ನಡೆದಿದ್ದು, ಐತಿಹಾಸಿಕ ದಿನವಾಗಿದೆ. ನಮಗೂ ಹಾಗೂ ವಿರೋಧ ಪಕ್ಷಗಳಿಗೂ ಇದು ಆತ್ಮವಿಶ್ವಾಸ ತುಂಬುತ್ತದೆ. ಇಡೀ ಸರ್ಕಾರವೇ ಬೆಳಗಾವಿಯಲ್ಲಿ ಇದ್ದು, ಇಷ್ಟೂ ನಡೆಯದಿದ್ದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಅದರಂತೆ ಇಂದೂ ಸಹ ಮಧ್ಯರಾತ್ರಿಯವರೆಗೆ ಸದನ ನಡೆಯಲಿದೆ. ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಪುಸ್ತಕ ನೀಡದೆ ಮಾರಾಟ ಮಾಡಿದ ಶಿಕ್ಷಕರು ಹಾಗೂ ಅಧಿಕಾರಿಗಳ ವಿರುದ್ಧ ಈಗಾಗಲೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಅವರಿಗೆ ಬಿಸಿ ಮುಟ್ಟಿಸಿದ್ದೇವೆ" ಎಂದು ಎಚ್ಚರಿಸಿದರು.
ಇದನ್ನೂ ಓದಿ: ಅಂತರ್ಜಲ ತಿದ್ದುಪಡಿ, ರೋಪ್ ವೇಸ್ ಸೇರಿ ವಿಧಾನಸಭೆಯಲ್ಲಿ 8 ಮಸೂದೆಗಳು ಅಂಗೀಕಾರ