ಬೆಂಗಳೂರು: ಅಲ್ಪ ಪ್ರಮಾಣದ ಬರ ಪರಿಹಾರ ಹಣ ಕೊಟ್ಟಿದ್ದಾರೆ. ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಾವು ಸೆಪ್ಟೆಂಬರ್ನಲ್ಲಿ ಬರ ಪರಿಹಾರಕ್ಕೆ ಮನವಿ ಕೊಟ್ಟಿದ್ದೆವು. ಕೇಂದ್ರ ತಂಡ ಬಂದು ಅಧ್ಯಯನ ಮಾಡಿ ಹೋಗಿತ್ತು. ರಾಜ್ಯದ ಮನವಿಯನ್ನು ಕೇಂದ್ರ ಪುರಸ್ಕರಿಸಿತ್ತು. ಆದರೆ ಕೇಂದ್ರ ಸಚಿವರನ್ನು ಭೇಟಿಮಾಡಿದ್ರು ಪರಿಹಾರ ಬಿಡುಗಡೆ ಮಾಡಿರಲಿಲ್ಲ. ನಾವು ಮನವಿ ಕೊಟ್ಟು ಏಳು ತಿಂಗಳು ಆಗಿತ್ತು. ಕರ್ನಾಟಕದ ಮನವಿಗೆ ಗೌರವ ಕೊಡಲಿಲ್ಲ. ಅದಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದೆವು ಎಂದರು.
ಬರ ಪರಿಹಾರಕ್ಕಾಗಿ ಕಾನೂನಿನ ಹೋರಾಟ ಮಾಡಬೇಕಾಯ್ತು. ರಾಜ್ಯದ ಮನವಿಯನ್ನು ಕೋರ್ಟ್ ಪ್ರಶ್ನೆ ಮಾಡಲಿಲ್ಲ. ನಾವು ಸಮಯಕ್ಕೆ ಸರಿಯಾಗಿ ಮನವಿ ಮಾಡಿದ್ವಿ. ನಾವು ನಿರ್ಧಾರ ಮಾಡಲು ಸಮಯ ಬೇಕು ಎಂದು ಕೇಂದ್ರದ ವಕೀಲರು ಮನವಿ ಮಾಡಿದ್ರು. ನಮ್ಮ ಹೋರಾಟದ ಮೂಲಕ ಪರಿಹಾರ ಹಣ ಬಂದಿದೆ. ನಮಗೆ ಕಾನೂನು ಬದ್ಧವಾಗಿ ಬಂದಿರುವ ಹಣ ಇದು. ಈಗ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದ್ರೆ ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ಅಧಿಕೃತ ಆದೇಶ ಬರಬಹುದು ಎಂದು ನಾವು ನಿರೀಕ್ಷೆಯಲ್ಲಿಯೇ ಇದ್ದೇವೆ. ನಾವು ಸುಮಾರು 18 ಸಾವಿರ ಕೋಟಿಗೆ ಮನವಿ ಸಲ್ಲಿಸಿದ್ದೆವು. ಗಂಭೀರತೆಯ ಆಧಾರದ ಮೇಲೆ ಪರಿಹಾರ ಕೇಳಿದ್ವಿ. ಈಗ 3,400 ಕೋಟಿಯಷ್ಟು ಪರಿಹಾರ ಹಣ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮುಖ್ಯವಾಗಿ ನಮಗೆ ಪರಿಹಾರ ಬೇಕು. ಅತ್ಯಂತ ಕಡಿಮೆ ಹಣ ಕೊಟ್ಟಿದ್ದಾರೆ. ಹಣಕಾಸು ಇಲಾಖೆಯಲ್ಲಿ ತೀರ್ಮಾನ ಆಗಿದೆ. ಕೇಂದ್ರದಿಂದ ನಮಗೆ ಅಧಿಕೃತ ಮಾಹಿತಿ ಇದೆ. ಇನ್ನೊಂದು ಕಂತು ಬರುತ್ತೆ ಅಂತ ಇಲ್ಲ. ನಾವು ವಾಪಸ್ ಪತ್ರ ಬರೆಯುತ್ತೇವೆ. ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.