ಬೆಂಗಳೂರು : ಕೇಂದ್ರದಿಂದ ಬಿಡುಗಡೆಯಾದ NDRF ಹಣದ ಪೈಕಿ ಒಟ್ಟು 32.12 ಲಕ್ಷ ರೈತರ ಖಾತೆಗೆ ಈವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪರಿಹಾರ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಈ ದಿನದವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮಾ ಮಾಡಲಾಗಿದೆ. ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ ಎಂದರು.
ಇದಲ್ಲದೇ ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ 400-500 ಕೋಟಿ ರೂ. ಪರಿಹಾರ ನೀಡಬೇಕಿದೆ. 10 ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇದೆಲ್ಲಾ ಸೇರಿ ಎನ್‌ಡಿಆರ್‌ಎಫ್ ಹಣ 3,450 ಕೋಟಿ ರೂ. ಸೇರಿ, ಒಟ್ಟು 4,300 ಕೋಟಿ ಪರಿಹಾರ ಕೊಟ್ಟಂತೆ ಆಗುತ್ತೆ ಎಂದರು.
ಯಾವ ಬೆಳೆಗೆ ಎಷ್ಟು ಪರಿಹಾರ? : ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿ ಮಾಡಲಾಗಿದೆ. ಅದರಂತೆ ಮಳೆಯಾಶ್ರಿತ ಬೆಳೆಗೆ 8,500 ರೂ. ನೀರಾವರಿ ಪ್ರದೇಶದ ಬೆಳೆಗೆ 17,000 ರೂ. ಮತ್ತು ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ 22,500 ರೂ. ಪರಿಹಾರ ನೀಡಲಾಗುತ್ತಿದೆ.
ಈಗಾಗಲೇ ರಾಜ್ಯ ಸರ್ಕಾರ ಕಳೆದ ಜನವರಿಯಲ್ಲಿ ರೈತರಿಗೆ ಗರಿಷ್ಠ 2 ಸಾವಿರ ರೂ. ವರೆಗೆ ಮಧ್ಯಂತರ ಪರಿಹಾರ ಪಾವತಿಸಿದೆ. ರಾಜ್ಯದ 223 ಬರಪೀಡಿತ ತಾಲೂಕುಗಳ ಒಟ್ಟು 33,55,599 ರೈತರಿಗೆ 636.44 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಕಳೆದ ಜನವರಿ 22ರಂದು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿತ್ತು. ಈಗ ಆ ಮೊತ್ತ ಕಡಿತ ಮಾಡಿಕೊಂಡು ಎನ್ ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಮಾರ್ಗಸೂಚಿ ಅನ್ವಯ ನಿಗದಿಯಾದ ಬಾಕಿ ಮೊತ್ತ ಜಮಾ ಮಾಡಲಾಗುತ್ತಿದೆ. ಮೊದಲು ಕಂತು ಮತ್ತು ಎರಡು ಕಂತು ಸುಮಾರು 3,000 ಕೋಟಿ ರೂ. ಹಣ ರೈತರ ಖಾತೆಗೆ ಜಮೆಯಾಗಿದೆ ಎಂದರು.
ಉಳಿದ ಪರಿಹಾರ ಹಣ ಬಿಡುಗಡೆ ಸಂಬಂಧ ಕೋರ್ಟ್ನಲ್ಲಿ ಅರ್ಜಿ ಹಾಕಿದ್ದೇವೆ. ರಜೆಯ ಬಳಿಕ ಮತ್ತೆ ವಿಚಾರಣೆಗೆ ಬರಲಿದೆ. ಮೊನ್ನೆ ಸುಮಾರು 200 ಪುಟಗಳ ಕೇಂದ್ರ ಬರ ಅಧ್ಯಯನ ತಂಡ ಶಿಫಾರಸು ಮಾಡಿದ ಐಎಂಸಿಟಿ ವರದಿಯನ್ನು ಕೊಟ್ಟಿದ್ದಾರೆ. ಅದರಲ್ಲಿ ಕೆಲವು ಕರೆಕ್ಷನ್ ಇದೆ. ಅದನ್ನು ಪರಿಶೀಲನೆ ಮಾಡಿ ಮುಂದೆ ಕೋರ್ಟ್ನಲ್ಲಿ ಇಡಲಿದ್ದೇವೆ ಎಂದು ತಿಳಿಸಿದರು.
ಸಣ್ಣ, ಅತಿ ಸಣ್ಣ ರೈತರಿಗೆ 3,000 ರೂ. ಪಾವತಿಗೆ ತೀರ್ಮಾನ: ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ರೈತರ ಪ್ರತಿ ಕುಟುಂಬಕ್ಕೆ 3,000 ರೂ. ಕೊಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ರೈತರ 16 ಲಕ್ಷ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ತಲಾ 3,000 ರೂ. ಕೊಡಲು ತೀರ್ಮಾನಿಸಲಾಗಿದೆ. ಅವರ ಜೀವನೋಪಾಯದ ನಷ್ಟಕ್ಕೆ ಪರಿಹಾರ ಕೊಡಲಾಗುತ್ತೆ. ಆ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಡಿಸಿ, ತಹಶೀಲ್ದಾರ್ ಖಾತೆಯಲ್ಲಿ 836 ಕೋಟಿ ರೂ : ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಲಾಗಿದೆ ಹಾಗೂ 462 ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಭೆಗಳನ್ನು ನಡೆಸಲಾಗಿದೆ. ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
153 ನಗರ ಪ್ರದೇಶದ ವಾರ್ಡ್‌ಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 35 ವಾರ್ಡ್‌ಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ಅವಶ್ಯಕತೆಯಿರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಭರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ಗಳ ಖಾತೆಗಳಲ್ಲಿ ರೂ. 836 ಕೋಟಿ ಅನುದಾನ ಲಭ್ಯವಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು: ಹೆಚ್ಡಿಕೆಗೆ ಸಚಿವ ಕೃಷ್ಣ ಬೈರೇಗೌಡ ತಿರುಗೇಟು - Minister Krishna Byre Gowda