ಮೈಸೂರು: ಮೈಸೂರು ಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ಇಂದು ಮೈಸೂರು ಮೃಗಾಲಯದಲ್ಲಿ ವಾಟ್ಸಾಪ್ ಟಿಕೆಟ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ. ಈಗ ವಾಟ್ಸಪ್ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದೆ. ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿದರು. ಅಷ್ಟೇ ಅಲ್ಲ, ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು.
ವಿದ್ಯುತ್ ಸ್ಪರ್ಶದಿಂದ ಆನೆಗಳ ಸಾವು ಆಗುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸಮಿತಿ ರಚನೆ ಮಾಡಿ ವರದಿ ಕೊಡಿ ಎಂದು ಹೇಳಿದ್ದೇನೆ. ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇಂತಹ ಸಾವುಗಳು ಆಗಬಾರದು. ಇದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿ ಪುನರಾವರ್ತನೆ ಆಗದ ರೀತಿಯಲ್ಲಿ ಶಾಶ್ವತ ಪರಿಹಾರ ತೆಗೆದುಕೊಳ್ಳುವ ರೀತಿಯಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಅರ್ಜುನ ಆನೆಯ ಸ್ಮಾರಕ ರೆಡಿಯಾಗುತ್ತಿದೆ. ವಿನ್ಯಾಸ ತಯಾರಾಗಿದೆ. ಮುಂದಿನ 15 ದಿನದೊಳಗೆ ನಾವು ಶಂಕು ಸ್ಥಾಪನೆ ಮಾಡುತ್ತೇವೆ. ಉತ್ತಮವಾದ ಸ್ಮಾರಕವನ್ನು ಹಾಸನದಲ್ಲಿಯೂ ಮತ್ತು ಬಳ್ಳೆಯಲ್ಲಿಯೂ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಆಂಧ್ರ ಸರ್ಕಾರದವರು ಮನವಿ ಮಾಡಿದ್ದಾರೆ. ನಮಗೆ ಕುಮ್ಕಿ ಆನೆ, ಸಾಕಾನೆ ಕೋಡುವಂತೆ ಮನವಿ ಮಾಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಆನೆಗಳು ಇಲ್ಲ. ಕೆಲವೊಂದು ರಾಜ್ಯಗಳಲ್ಲಿ ಶಿಬಿರವೂ ಇಲ್ಲ, ಸಾಕಾನೆಯೂ ಇಲ್ಲ. ಪುಂಡಾನೆಗಳ ದಾಳಿಯಿಂದ ಜನರು ಸಾಯುತ್ತಿದ್ದಾರೆ. ಅಂತಹ ಕಡೆಗಳಲ್ಲಿ ಆನೆ ಕಾರ್ಯಾಚರಣೆ ಮಾಡುವಂತಹ ಪರಿಸ್ಥಿತಿ ಇರುತ್ತದೆ. ಹೀಗಾಗಿ ನೆರೆ ರಾಜ್ಯದವರು ಸಹಾಯ ಕೋರಿ ಬಂದಿದ್ದಾರೆ. ಆದ್ರೆ ನಾವು ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಾವು ಅಂತಿಮವಾಗಿ ತೀರ್ಮಾನ ಮಾಡುತ್ತೇವೆ. ಯಾವುದೇ ತೀರ್ಮಾನ ತೆಗೆದುಕೊಂಡರು ದಸರಾಕ್ಕೆ ಬೇಕಾಗುವ ಆನೆಗಳನ್ನು ಎಲ್ಲಿಯೂ ಕೊಡುವುದಿಲ್ಲ. ಯಾರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲವೆಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.