ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇಂದು ಬೈಕ್ ರ‌್ಯಾಲಿ ಹಮ್ಮಿಕೊಳ್ಳುವ ಮೂಲಕ ಭರ್ಜರಿ ಪ್ರಚಾರ ಶುರು ಮಾಡಿದರು.
ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭ್ಯರ್ಥಿ ಮೃಣಾಲ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಹಿಂದು ಮತಗಳನ್ನ ಸೆಳೆಯಲು ಕೇಸರಿ ಅಸ್ತ್ರವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯೋಗಿಸಿದ್ದಾರೆ. ಮರಾಠಿ ಭಾಷಿಕರೇ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧ್ವಜಕ್ಕಿಂತ ಹೆಚ್ಚಾಗಿ ಕೇಸರಿ ಧ್ವಜಗಳೇ ರ್ಯಾಲಿಯುದ್ದಕ್ಕೂ ರಾರಾಜಿಸಿದವು.
ಹಿಂಡಲಗಾ ಗಣಪತಿ ದೇವಸ್ಥಾನದಿಂದ ಅಂಬೇಡ್ಕರ್ ಗಾರ್ಡನ್ಗೆ ರ್ಯಾಲಿ ಆಗಮಿಸಿತು. ಈ ವೇಳೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ರಾಣಿ ಚೆನ್ನಮ್ಮನ ಪುತ್ಥಳಿಗೆ ಲಕ್ಷ್ಮೀ ಹೆಬ್ಬಾಳ್ಕರ್, ಮೃಣಾಲ್ ಮಾಲೆ ಹಾಕಿ ಗೌರವ ಸಮರ್ಪಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿ ಹಲವು ಕಾಂಗ್ರೆಸ್ ಮುಖಂಡರು ಇದ್ದರು.
ಬಳಿಕ ಸಂಗೊಳ್ಳಿ ರಾಯಣ್ಣ, ಧರ್ಮವೀರ ಸಂಭಾಜಿ ಪುತ್ಥಳಿ, ವಿಶ್ವಗುರು ಬಸವೇಶ್ವರ, ಛತ್ರಪತಿ ಶಿವಾಜಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಕೊನೆಗೆ ರಾಜಹಂಸಗಢಕ್ಕೆ ತೆರಳಿದ ರ್ಯಾಲಿ ಅಂತ್ಯವಾಯಿತು.
ಮೊಮ್ಮಗಳನ್ನು ಮುದ್ದಾಡಿದ ಸಚಿವೆ: ರ‌್ಯಾಲಿ ಮಧ್ಯೆ ಎದುರಾದ ಮೊಮ್ಮಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುದ್ದಾಡಿದರು. ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬಂದ ವೇಳೆ ಮೊಮ್ಮಗಳಿಗೆ ಮುದ್ದು ಮಾಡಿದರು. ಈ ವೇಳೆ ರಸ್ತೆಯಲ್ಲೇ ಅತ್ತೆಯ ಕಾಲಿಗೆ ಮೃಣಾಲ್ ಪತ್ನಿ ಹಿತಾ ಹೆಬ್ಬಾಳ್ಕರ್ ನಮಸ್ಕರಿಸಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್, ವಿನಾಯಕನ ಪೂಜೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಗ್ರಾಮೀಣ ಕ್ಷೇತ್ರದ ಗುರು ಹಿರಿಯರ ನೇತೃತ್ವದಲ್ಲಿ ಪೂಜೆ ಮಾಡಿದ್ದೇವೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ನಾನು, ಬೆಳಗಾವಿಗೆ ಸತೀಶ್ ಜಾರಕಿಹೊಳಿ ಉಸ್ತುವಾರಿ ಇದ್ದಾರೆ. ಸಮನ್ವಯತೆಯಿಂದ ಎರಡು ಕಡೆ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ಶಂಭು ಕಲ್ಲೋಳ್ಕರ್ ಚಿಕ್ಕೋಡಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಿವೃತ್ತ ಐಎಎಸ್ ಅಧಿಕಾರಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ನಾನು ಅವರ ಜೊತೆಗೆ ಮಾತಾಡಿ, ಕಾಂಗ್ರೆಸ್ ಪರ ಪ್ರಚಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಇದು ನನ್ನ ಕುಟುಂಬದ 6ನೇ ಚುನಾವಣೆ: ಭರವಸೆ ಇಟ್ಟು ಕಾಂಗ್ರೆಸ್ ಟಿಕೆಟ್ಅನ್ನು ನನ್ನ ಮಗನಿಗೆ ಕೊಟ್ಟಿದ್ದಾರೆ. ಕೆಲಸ ಮಾಡಿ ನನ್ನ ಪುತ್ರನ ಗೆಲುವಿಗೆ ಶ್ರಮಿಸುತ್ತೇವೆ. ದೇಶವನ್ನು ಯಂಗ್ ನೇಷನ್ ಎಂದು ಹೇಳ್ತಾರೆ. ಮಹಿಳೆಯರು, ಯುವಕರಿಗೆ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ. ಸಕಾರಾತ್ಮಕ ವಿಚಾರದೊಂದಿಗೆ ಚುನಾವಣೆಗೆ ಹೋಗುತ್ತೇನೆ. ತಂತ್ರ, ಕುತಂತ್ರ ಚುನಾವಣೆಯಲ್ಲಿ ಸರ್ವೇ ಸಾಮಾನ್ಯ. ಇದು ನನ್ನ ಕುಟುಂಬದ 6ನೇ ಚುನಾವಣೆ. ಸಹಜವಾಗಿ ಮಗ, ತಮ್ಮನ ಚುನಾವಣೆಯಲ್ಲಿ ಒತ್ತಡ ಇರುತ್ತದೆ. ಎಲ್ಲರ ಸಹಕಾರ ಇದ್ರೆ ಒತ್ತಡ ಕಡಿಮೆ ಆಗುತ್ತದೆ. 8 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೋರೆ ಹೋಗಲು ಸರ್ಕಾರದ ತೀರ್ಮಾನಕ್ಕೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಾಲ್ಕು ಸಾವಿರ ಕೋಟಿ ಪರಿಹಾರ ಕೇಳಿದ್ದೆವು. ಈವರೆಗೆ ಒಂದು ರೂಪಾಯಿ ಕೊಡಲಿಲ್ಲ. ಪ್ರವಾಹ, ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡಲಿಲ್ಲ. ಬರ ಸಂದರ್ಭದಲ್ಲಿ ಸಹಾಯ ಕೇಳಿದ್ರೆ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿಲ್ಲ. ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನ ಮಾಡುತ್ತೇವೆ ಎಂದರು.
ಬಿಜೆಪಿಯವರು ರಾಮನ ಹೆಸರಲ್ಲಿ ವೋಟ್ ಕೇಳ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಕೂಡಾ ರಾಮನ ಭಕ್ತಳು. ನಮ್ಮ ಸಂಸ್ಕೃತಿ ಸಹ ಅದೇ ಆಗಿದೆ, ಅದನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಕೇವಲ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತೇವೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಹ ಕೊಟ್ಟಿದ್ದೇನೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 6 ಜನ ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟ ಬಗ್ಗೆ ಬಿಜೆಪಿ ಟೀಕೆಗೆ ಬಿಜೆಪಿಯವರಿಗೆ ಚುನಾವಣೆ ಮುಗಿದ ಬಳಿಕ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಆರಂಭಿಸುವಾಗ ಮನೆಯ ಪರಂಪರೆಯಂತೆ ಹಿಂಡಲಗಾ ಗಣೇಶನಿಗೆ ಪೂಜೆ ಸಲ್ಲಿಸಿ ರ್ಯಾಲಿಗೆ ಚಾಲನೆ ನೀಡಿದ್ದೇವೆ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡುತ್ತೇವೆ. ತಾಯಿ ಮತ್ತು ಮಾವನವರ ಆಶೀರ್ವಾದ, ಮಾರ್ಗದರ್ಶನ ನನಗಿದ್ದು, ಅವರ ಕೆಲಸ ಮತ್ತು ಸಮಾಜ ಸೇವೆ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ ಎಂದರು.
ಇದನ್ನೂಓದಿ:ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ರಾಜೀನಾಮೆ: ಶೆಟ್ಟರ್ ಭವಿಷ್ಯ - Jagadish Shettar