ಬೆಂಗಳೂರು: ಯಾವ ನಿಗಮವು ಯಾವ ಸಚಿವಾಲಯದ ಅಡಿ ಬರುತ್ತದೆ ಎಂಬ ಪ್ರಾಥಮಿಕ ಜ್ಞಾನ ಇಲ್ಲದ ನಿಮ್ಮಂತಹವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿರುವುದು ರಾಷ್ಟ್ರೀಯ ದುರಂತಗಳಲ್ಲಿ ಒಂದು ಎಂದು ಆರ್. ಅಶೋಕ್ ವಿರುದ್ಧ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಕ್ಸ್ ಪೋಸ್ಟ್ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭ್ರಷ್ಟಾಚಾರವನ್ನ ಅಧಿಕಾರಿಯ ತಲೆಗೆ ಕಟ್ಟಲು ಹೋಗಿ ಕಿರುಕುಳ ನೀಡಿದ್ದರಿಂದ ಆತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುವಂತೆ ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ 11,000 ಕೋಟಿ ರೂಪಾಯಿ ಎಸ್ಸಿಎಸ್ ಪಿ/ಟಿಎಸ್ ಪಿ ಹಣವನ್ನ ಗ್ಯಾರಂಟಿ ಹೆಸರಿನಲ್ಲಿ ಲಪಟಾಯಿಸಿ ಈಗಾಗಲೇ ದಲಿತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದ್ದೀರಿ. ಈಗ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿ ಒಬ್ಬ ಅಧಿಕಾರಿಯ ಸಾವಿಗೆ ಕಾರಣರಾಗಿದ್ದೀರಿ. ಸಿಎಂ ಸಿದ್ದರಾಮಯ್ಯನವರೇ, ಈ ಕೂಡಲೇ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಿ ಈ ಪ್ರಕರಣದ ತನಿಖೆಗೆ ಆದೇಶ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಆತ್ಮಹತ್ಯೆಗೆ ಶರಣಾದ ಅಧಿಕಾರಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದರು.
ಇದಕ್ಕೆ ಎಕ್ಸ್ ಪೋಸ್ಟ್ ಮೂಲಕ ತಿರುಗೇಟು ನೀಡಿದ ಸಚಿವ ಹೆಚ್.ಸಿ. ಮಹದೇವಪ್ಪ, ಮಾನ್ಯ ವಿರೋಧ ಪಕ್ಷದ ನಾಯಕರೇ, ಯಾವ ನಿಗಮವು ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂಬ ಪ್ರಾಥಮಿಕ ಜ್ಞಾನ ಇಲ್ಲದ ನಿಮ್ಮಂತಹವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ನೀಡಿರುವುದು ರಾಷ್ಟ್ರೀಯ ದುರಂತಗಳಲ್ಲಿ ಒಂದು. ಮಾಹಿತಿ ತಿಳಿಯದೇ ಮಾತನಾಡುವ ನೀವು ಮೊದಲು ರಾಜೀನಾಮೆ ನೀಡುವುದು ಹೆಚ್ಚು ಸೂಕ್ತವಾಗಿದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Watch.. ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ: ವಿದೇಶದಿಂದ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಹೇಳಿಕೆ - MP Prajwal Revanna