ಬೆಂಗಳೂರು : ಮುಡಾ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಲ್ಪಟ್ಟಿರುವ ಹಲವು ರಾಜಕಾರಣಿಗಳ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಡುಗಡೆ ಮಾಡಿದರು.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗಿನ ಸುದ್ದಿಗೋಷ್ಠಿ ವೇಳೆ ಮುಡಾದಿಂದ ಹೆಚ್. ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಪಡೆದ ನಿವೇಶನಗಳ ಪಟ್ಟಿ ಬಿಡುಗಡೆ ಮಾಡಿದರು. ವಿಪಕ್ಷದವರಿಗೂ ಮುಡಾದಲ್ಲಿ ಬಹಳಷ್ಟು ನಿವೇಶನ ಕೊಡಲಾಗಿದೆ. ಮಂಜೇಗೌಡ, ಜಿ. ಟಿ ದೇವೇಗೌಡರಿಗೆ 2 ನಿವೇಶನ, ಶೇಖರ್, ಸಿ. ಎನ್ ಮಂಜೇಗೌಡ, ಹೆಚ್. ವಿಶ್ವನಾಥ್, ಶೇಖರ್, ಸಾ. ರಾ ಮಹೇಶ್ಗೆ 2 ನಿವೇಶನ, ಹೆಚ್. ಡಿ ಕುಮಾರಸ್ವಾಮಿಗೆ 21,000 ಅಡಿ ನಿವೇಶನ ಕೊಡಲಾಗಿದೆ. ಇದೆಲ್ಲಾ ಬದಲಿ ನಿವೇಶನವಾಗಿದೆ. 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ನ್ಯಾಯಾಂಗ ಆಯೋಗ ಇದನ್ನೆಲ್ಲವನ್ನೂ ತನಿಖೆ ಮಾಡಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ಹೆಚ್. ಡಿ ಕುಮಾರಸ್ವಾಮಿ ನಿವೇಶನ ದಾಖಲೆ ಬಿಡುಗಡೆ : ಬಿಜೆಪಿ-ಜೆಡಿಎಸ್ ಮುಖಂಡರು ಮುಡಾದಿಂದ ಪಡೆದಿರುವ ಸೈಟ್ಗಳ ವಿವರ ಮತ್ತು ಹೆಸರನ್ನು ಓದಿ ದಾಖಲೆ ಮುಂದಿಟ್ಟ ಸಚಿವ ಬೈರತಿ ಸುರೇಶ್, ಹೆಚ್. ಡಿ ಕುಮಾರಸ್ವಾಮಿ ನಿವೇಶನ ಸಂಬಂಧ ಕೆಲ ದಾಖಲೆಗಳನ್ನು ಬಹಿರಂಗಪಡಿಸಿದರು. ಬೈರತಿ ಸುರೇಶ್ ಬಿಡುಗಡೆ ಮಾಡಿದ ದಾಖಲೆ ಪ್ರಕಾರ, ಹೆಚ್. ಡಿ ಕುಮಾರಸ್ವಾಮಿಯವರಿಗೆ ಮೈಸೂರಿನ ಇಂಡಸ್ಟ್ರೀಯಲ್ ಸಬರ್ಬ್ 3ನೇ ಹಂತದ ಬಡಾವಣೆಯಲ್ಲಿ 7.11.1984ರಲ್ಲಿ 21,000 ಚದರ ಅಡಿಯ ಕೈಗಾರಿಕಾ ನಿವೇಶನ ಮಂಜೂರಾಗಿದೆ. 16.01.1985ರಲ್ಲಿ ಈ ನಿವೇಶನದ ಸ್ವಾಧೀನ ಪತ್ರ ನೀಡಲಾಗಿದೆ.
23.02.2017 ಮತ್ತು 16.10.2019ರಂದು ಕುಮಾರಸ್ವಾಮಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ತಮಗೆ ಹಂಚಿಕೆಯಾಗಿರುವ ನಿವೇಶನದ ಅಳತೆಯ ಭಾಗಶಃ ಭಾಗವನ್ನು ಬೇರೆಯವರಿಗೆ ಮಂಜೂರು ಮಾಡಿದ್ದು, ತಮಗೆ ಹಂಚಿಕೆಯಾಗಿರುವ ನಿವೇಶನದ ಪೂರ್ಣ ವಿಸ್ತೀರ್ಣ ಲಭ್ಯವಿಲ್ಲದ ಕಾರಣ ಕೈಗಾರಿಕೆ ಪ್ರಾರಂಭಿಸಲು ಅನುಕೂಲವಾಗುವಂತೆ ಬದಲಿ ನಿವೇಶನ ನೀಡುವಂತೆ ಕೋರಿರುತ್ತಾರೆ. 15.11.2020 ರಂದು ಮತ್ತೊಂದು ಮನವಿ ಸಲ್ಲಿಸಿದ್ದಾರೆ.
ಮುಡಾ ತಾಂತ್ರಿಕ ಶಾಖೆಯ ವರದಿಯಂತೆ ಮೂಲ ಚೌತರ್ಪಿನಂತೆ ದಕ್ಷಿಣ ದಿಕ್ಕಿಗೆ ನಿ.ಸಂ.17/ಸಿ ಬದಲಾಗಿ 17/ಡಿ ಇರುವುದಾಗಿ ಹಾಗೂ ನಿ.ಸಂ.17/ಬಿ1 ರ ಅಳತೆ 46/284-13,064 ಚದರ ಅಡಿಗಳು ಮಾತ್ರ ಭೌತಿಕವಾಗಿ ಲಭ್ಯವಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಮೂಲ ಹಂಚಿಕೆ ಅಳತೆಯ 75/280- 21,000 ಚ.ಅಡಿಗಳ ಬದಲಾಗಿ ಭೌತಿಕವಾಗಿ 46/284=13,064 ಚ.ಅಡಿಗಳು ಮಾತ್ರ ಲಭ್ಯವಿರುವುದಾಗಿ ತಾಂತ್ರಿಕ ಶಾಖೆಯವರು ವರದಿ ನೀಡಿರುವುದರಿಂದ ಮೂಲ ಅಳತೆಯ ವಿಸ್ತೀರ್ಣಕ್ಕಿಂತ 7,936 ಚದರ ಅಡಿಗಳಷ್ಟು ಕಡಿಮೆ ಇರುವುದರಿಂದ ಬದಲಿ ನಿವೇಶನ ನೀಡುವ ಸಂಬಂಧ ಪ್ರಾಧಿಕಾರ ಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
7.01.23ರಂದು ಮುಡಾ ಸಭೆಯ ನಿರ್ಣಯದಂತೆ ಮಂಜೂರು ಮಾಡಿದ್ದ ನಿವೇಶನದ ಅಳತೆಗೆ ಹೋಲಿಸಿಕೊಂಡಲ್ಲಿ ಲಭ್ಯವಿರುವ ನಿವೇಶನದ ಕಡಿಮೆಯಾಗಿರುವುದರಿಂದ ಅರ್ಜಿದಾರರ ಕೋರಿಕೆಯ ಅನುಸಾರ ಬದಲಿ ನಿವೇಶನ ಮಂಜೂರು ಮಾಡಲು ಸಭೆ ತೀರ್ಮಾನಿಸಿತ್ತು.
ತಾಂತ್ರಿಕ ಶಾಖೆಯ ವರದಿಯಲ್ಲಿ ನಿವೇಶನ ಸಂಖ್ಯೆ: 17/ಬಿ1 ರ ಅಳತೆ 75*280 = 21,000 ಚದರ ಅಡಿಗಳಿಗೆ ತಾಳೆ ಹೊಂದುವ ಯಾವುದೇ ನಿವೇಶನಗಳು ಲಭ್ಯವಿಲ್ಲವೆಂದು ಹಾಗೂ ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತ ಬಡಾವಣೆಯ ನಿವೇಶನ ಸಂಖ್ಯೆ:23/ಇ ಭೌತಿಕವಾಗಿ ಖಾಲಿ ಇದ್ದು, ಅದರ ಅಳತೆ 82*400 = 32,800 ಚದರ ಅಡಿಗಳಾಗಿರುತ್ತದೆ. ಸದರಿ ನಿವೇಶನ ಯಾರಿಗೂ ಹಂಚಿಕೆಯಾಗದಿರುವ ಬಗ್ಗೆ ಪರಿಶೀಲಿಸಿಕೊಂಡು ಬದಲಿ ನಿವೇಶನ ಹಂಚಿಕೆಗಾಗಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಪ್ರಾಧಿಕಾರದ ಆಯುಕ್ತರು ನಿವೇಶನ ಸಂಖ್ಯೆ: 23/ಇನ್ನು ಬದಲಿ ನಿವೇಶನವನ್ನಾಗಿ ನೀಡಲು ಆದೇಶ ನೀಡಿರುತ್ತಾರೆ.
ಬದಲಿ ನಿವೇಶನವಾಗಿ ಪ್ರಸ್ತಾಪಿಸಿರುವ ನಿವೇಶನ ಸಂಖ್ಯೆ : 23/ಇ ಅಳತೆ 82+400 = 32,800 ಚದರ ಅಡಿಗಳಾಗಿದ್ದು, ಮೂಲ ನಿವೇಶನ ಸಂಖ್ಯೆ: 17/ಬಿ1 ರ ಒಟ್ಟು ವಿಸ್ತೀರ್ಣ 21,000 ಚ.ಅಡಿಗಳಾಗಿದ್ದು, ಬದಲಿ ನಿವೇಶನಕ್ಕೆ ಸೂಚಿಸಿರುವ ನಿವೇಶನದ ವಿಸ್ತೀರ್ಣವು 11,000 ಚದರ ಅಡಿಗಳು ಹೆಚ್ಚುವರಿಯಾಗಿರುತ್ತವೆ.
(ಈ ನಡುವೆ ನಿವೇಶನ ಸಂಖ್ಯೆ:23/ಇ ಗೆ ಸಂಬಂಧಿಸಿದಂತೆ ಪಂಕಜಮ್ಮ ಎಂಬವರು ಪ್ರಾಧಿಕಾರದ ವಿರುದ್ಧ 10ನೇ ಅಡಿಷಿನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಮೈಸೂರು ನ್ಯಾಯಾಲಯದಲ್ಲಿ 23/ಇ ಬಗ್ಗೆ ದಾವೆ ಸಲ್ಲಿಸಿದ್ದು, ಸದರಿ ನಿವೇಶನವು ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ಬಗ್ಗೆ ಮಾಹಿತಿ ಇರುವುದಿಲ್ಲ. ಸದರಿ ಹೆಚ್ಚುವರಿ ಅಳತೆಗೆ ಯಾವ ದರ ನಿಗದಿಪಡಿಸಬಹುದು ಎಂಬುದರ ಬಗ್ಗೆ ಕಡತ ನಿರ್ವಹಣೆ ಪ್ರಗತಿಯಲ್ಲಿದ್ದು, ಹಾಗಾಗಿ ಬದಲಿ ನಿವೇಶನ ಮಂಜೂರಾತಿ ಪತ್ರ ನೀಡಿರುವುದಿಲ್ಲ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.)
ಇದನ್ನೂ ಓದಿ : ಮುಡಾ ನಿವೇಶನ ಹಂಚಿಕೆ ಕಾನೂನುಬದ್ಧ, ಬಿಜೆಪಿ-ಜೆಡಿಎಸ್‌ನಿಂದ ನನ್ನ ತೇಜೋವಧೆ ಯತ್ನ: ಸಿದ್ದರಾಮಯ್ಯ - CM Siddaramaiah