ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮೈಕ್ರೋಸಾಫ್ಟ್ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡ ಬೇಕಾದ ಪರಿಸ್ಥಿತಿ ಉಂಟಾಯಿತು. ಮೈಕ್ರೋಸಾಫ್ಟ್ನಿಂದಾಗಿ ವಿಮಾನಯಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು ಏರ್ಪೋರ್ಟ್ನಲ್ಲಿ 28 ನಿರ್ಗಮನ, 25 ಆಗಮನ ಸೇರಿದಂತೆ ಒಟ್ಟು 55 ವಿಮಾನ ರದ್ದಾಗಿದೆ. ಹಾಗೆಯೇ 77 ವಿಮಾನಗಳು ವಿಳಂಬವಾಗಿದೆ. ಬಹುತೇಕ ವಿಮಾನಗಳು ಇಂಡಿಗೋ ಸಂಸ್ಥೆಗೆ ಸೇರಿದವು ಎಂಬ ಮಾಹಿತಿ ತಿಳಿದು ಬಂದಿದೆ.
ಮೈಕ್ರೋಸಾಫ್ಟ್ ವ್ಯವಸ್ಥೆ ಅಸ್ತವ್ಯಸ್ತಗೊಂಡ ಪರಿಣಾಮ ವಿಮಾನಯಾನಕ್ಕೆ ಸಿದ್ಧಗೊಂಡಿದ್ದವರ ಚೆಕ್-ಇನ್ ಅನ್ನು ಮಾನವಚಾಲಿತವಾಗಿ ನಿರ್ವಹಿಸಲಾಯಿತು. ಟರ್ಮಿನಲ್‌ನ ಒಳಗೆ ಕಾಗದದ ಬೋರ್ಡಿಂಗ್ ಪಾಸ್ ನೀಡುವುದರೊಂದಿಗೆ, ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು 2 ಎರಡರಲ್ಲೂ ಸರತಿ ಸಾಲುಗಳು ಬಹಳ ನಿಧಾನವಾಗಿ ಚಲಿಸಿದವು. "ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಪ್ರಯಾಣಿಕರ ದಟ್ಟಣೆಯಿಂದಾಗಿ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು" ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಒಳಬರುವ ಮತ್ತು ಹೊರಹೋಗುವ ಎರಡೂ ವಿಮಾನಗಳಲ್ಲಿ ಸರಾಸರಿ 45ರಿಂದ 50 ನಿಮಿಷಗಳ ಕಾಲ ವಿಳಂಬ ಉಂಟಾಯಿತು.
ವಿಮಾನ ರದ್ದುಗೊಂಡ ಪರಿಣಾಮ ಹಲವು ಪ್ರಯಾಣಿಕರು ತಮ್ಮ ಹಣವನ್ನು ಮರಳಿ ಪಡೆಯುವುದಕ್ಕೆ ಕೌಂಟರ್ಗಳ ಬಳಿ ಕಾಯುತ್ತಿದ್ದರು. ಸಿಸ್ಟಮ್ಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ತಕ್ಷಣವೇ ಹಣವನ್ನು ಮರಳಿ ನೀಡಲಾಗುವುದಿಲ್ಲ ಎಂದು ಇಂಡಿಗೋ ಸಂಸ್ಥೆ ಹೇಳಿತ್ತು. ಮರುದಿನದ ವಿಮಾನಗಳ ಹಾರಾಟದ ಸ್ಥಿತಿ ತಿಳಿಯದ ಕಾರಣ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮರುದಿನಕ್ಕೆ ಮರುಹೊಂದಿಸಲು ಸಾಧ್ಯವಾಗಲಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ಭಾರತೀಯ ವಿಮಾನ ಪ್ರಾಧಿಕಾರದ ಹೇಳಿಕೆ ಪ್ರಕಾರ, ಬೆಂಗಳೂರಿನ ವಿಮಾನಗಳಲ್ಲಿ ಬಹುತೇಕ ಇಂಡಿಗೋ ಸಂಸ್ಥೆಯ ವಿಮಾನಗಳ ಸೇವೆ ರದ್ದುಗೊಂಡಿದೆ. ಇಂಡಿಗೋ ಸಂಸ್ಥೆಯ ದೆಹಲಿ, ಜೈಪುರ, ಅಹಮದಬಾದ್, ಮುಂಬೈ, ಭೂಫಾಲ್, ಮಧುರೈ, ಹೈದರಬಾದ್, ಚೆನೈ, ವಿಜಯವಾಡ ಮಾರ್ಗದ ವಿಮಾನಗಳು ರದ್ದುಗೊಂಡಿವೆ. ಅಂತಾರಾಷ್ಟ್ರೀಯ ಮತ್ತು ಕಾರ್ಗೋ ವಿಮಾನಗಳ ಸೇವೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ತಿಳಿಸಿದೆ.