ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್‌ಗೆ ಮುಂದಾಗಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿಸಿದ್ದು, ಒಂದೊಂದೇ ಗುಂಪಾಗಿ ಆಗಮಿಸುತ್ತಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಘೋಷಣೆ ಕೂಗುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾರೆ.
ಇಡೀ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಇರುವಾಗ ಮಹಾಮೇಳಾವ್ ನಡೆಸಲು ಎಂಇಎಸ್ ಮುಂದಾಗಿತ್ತು. ಹಾಗಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಡಿಸಿಪಿ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ಈವರೆಗೆ 50ಕ್ಕೂ ಅಧಿಕ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆಯುವ ವೇಳೆ ಪೊಲೀಸರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.
ಎಂಇಎಸ್ ಮಹಾಮೇಳಾವ್‌ಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೂ ಗದ್ದಲ ಎಬ್ಬಿಸಲು ಯತ್ನಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೊಗನೊಳ್ಳಿ ಚೆಕ್ ಪೋಸ್ಟ್ನಲ್ಲಿ ಕೊಲ್ಹಾಪುರದ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಕಾರ್ಯಕರ್ತರನ್ನು ನಿಪ್ಪಾಣಿ ಪೋಲಿಸರು ತಡೆದಿದ್ದಾರೆ. ಬೆಳಗಾವಿಗೆ ಎಂಇಎಸ್ ಮಹಾಮೇಳಾವ್ದಲ್ಲಿ ಭಾಗಿಯಾಗಲು ಇವರೆಲ್ಲಾ ಆಗಮಿಸುತ್ತಿದ್ದರು. ಕೊಲ್ಹಾಪುರ ಶಿವಸೇನೆ ಜಿಲ್ಲಾ ಅಧ್ಯಕ್ಷ ವಿಜಯ ದೇವನೆ ನೇತೃತ್ವದಲ್ಲಿ ಗಲಾಟೆ ಮಾಡುತ್ತಿದ್ದವರನ್ನು ಕರ್ನಾಟಕ ಪ್ರವೇಶಿಸದಂತೆ ಪೊಲೀಸರು ಗಡಿಯಲ್ಲಿ ತಡೆದಿದ್ದಾರೆ.
ಈ ವೇಳೆ ಮಾತನಾಡಿದ ರಮಾಕಾಂತ ಕೊಂಡೂಸ್ಕರ್, "ನಾವು ಮಹಾರಾಷ್ಟ್ರಕ್ಕೆ ಸೇರಲು ಇಚ್ಛಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿಗಾಗಿ ಎಲ್ಲರಿಗೂ ಪ್ರತಿಭಟಿಸಲು ಹಕ್ಕಿದೆ. ಅದೇ ರೀತಿ ವಿವಿಧ ಸಂಘಟನೆಗಳಿಗೆ ಅವಕಾಶ ನೀಡಿದೆ. ಆದರೆ, ನಮಗೆ ಮಾತ್ರ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿ ಸುವರ್ಣಸೌಧದದಲ್ಲಿ ₹45 ಲಕ್ಷ ವೆಚ್ಚದ ಹೊಸ ಸಭಾಧ್ಯಕ್ಷರ ಪೀಠ ಅಳವಡಿಕೆ