ಬೆಂಗಳೂರು: ರಾಜ್ಯದಿಂದ ಆಯ್ಕೆಯಾದ ಎಲ್ಲ ಲೋಕಸಭೆ, ರಾಜ್ಯಸಭೆ ಸದಸ್ಯರು ಹಾಗೂ ಕೇಂದ್ರ ಸಚಿವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಸಭೆ ನಡೆಸಲಾಗುತ್ತದೆ. ಕೇಂದ್ರದಲ್ಲಿ ರಾಜ್ಯದಿಂದ ಕಳುಹಿಸಿರುವ ಯೋಜನೆಗಳನ್ನು ಮಂಜೂರು ಮಾಡಿಸುವ, ಹಣ ಬಿಡುಗಡೆ ಮಾಡಿರುವ, ರಾಜ್ಯದ ಸಂಪನ್ಮೂಲಗಳ ಹೆಚ್ಚು ಮಾಡಲು ಸಹಾಯವನ್ನು ಮಾಡುವ ಪ್ರಯತ್ನ ಮಾಡಬೇಕೆಂದು ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಂಪೇಗೌಡರ ಜಯಂತಿ ಅಂಗವಾಗಿ ಇಂದು ವಿಧಾನಸೌಧದ ಆವರಣದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನೂ ಭೇಟಿ ಮಾಡಲಾಗುತ್ತದೆ. ಪ್ರಧಾನಿ, ಗೃಹ ಸಚಿವ, ಭೂ ಸಾರಿಗೆ, ಹಣಕಾಸು ಸಚಿವ, ರೈಲ್ವೆ, ನೀರಾವರಿ ಸಚಿವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿಗಳು ಜೂನ್ 29ರಂದು ಬೆಳಗ್ಗೆ 8 ಗಂಟೆಗೆ ಭೇಟಿ ಮಾಡಲು ಸಮಯ ಕೊಟ್ಟಿದ್ದಾರೆ. ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಭೇಟಿಗೆ ಸಮಯ ನೀಡಿದ್ದಾರೆ. ಗೃಹ ಸಚಿವರು ಇನ್ನೂ ಸಮಯ ಕೊಟ್ಟಿಲ್ಲ. ಕೇಂದ್ರ ಬಜೆಟ್ ಸಂಬಂಧ ರಾಜ್ಯದ ಯೋಜನೆಗಳ ಪಟ್ಟಿಯನ್ನು ಕೃಷ್ಣ ಬೈರೇಗೌಡ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಾನು ಬಜೆಟ್ ಪೂರ್ವಭಾವಿ ಸಭೆಗೆ ಹೋಗೋಕೆ ಆಗಿಲ್ಲ. ನಾನು ಭಾಷಣ ರೆಡಿ ಮಾಡಿ ಕೊಟ್ಟಿದ್ದೇನೆ ಎಂದು ಮಾಹಿತಿ ನೀಡಿದರು.
ಪ್ರಧಾನಿ ಮೋದಿ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಒಟ್ಟಿಗೆ ಸ್ವೀಕರ್ ಅವರನ್ನು ಪೀಠಕ್ಕೆ ಕರೆದುಕೊಂಡ ವಿಷಯದ ಪ್ರತಿಕ್ರಿಯಿಸಿದ ಸಿಎಂ, ಅದು ಒಂದು ಸಂಪ್ರದಾಯ. ಪ್ರಧಾನಿ, ಪ್ರತಿಪಕ್ಷದ ನಾಯಕರು ಒಟ್ಟಿಗೆ ಕರೆದುಕೊಂಡು ಹೋಗಿ ಪೀಠದ ಮೇಲೆ ಕೂರಿಸಿ, ಅಭಿನಂದಿಸುವುದು ಮೊದಲಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಇದರಂತೆ ಮಾಡಿದ್ದಾರೆ ಎಂದರು. ಇದೇ ವೇಳೆ, ಮೋದಿ ಬಳಹ ಮುಖ್ಯವಾಗಿ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ. ರಾಹುಲ್ ಗಾಂಧಿ ಇಡೀ ದೇಶದಲ್ಲಿ ಪಾದಯಾತ್ರೆ ಮಾಡಿದ್ದು, ಜನರ ಧ್ವನಿಯಾಗಿ ಸಮರ್ಥವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಇದೆ ಎಂದು ಹೇಳಿದರು.
ಭಾರತ ಎಲ್ಲರ ರಾಷ್ಟ್ರ - ಸಿದ್ದರಾಮಯ್ಯ: ಈ ಲೋಕಸಭೆ ಚುನಾವಣೆ ಫಲಿತಾಂಶಯು ಇದು ಹಿಂದೂ ರಾಷ್ಟ್ರವಲ್ಲ, ಎಲ್ಲ ದೇಶದ ಎಂಬುವುದನ್ನು ತೋರಿಸಿದ ಎಂಬ ನೊಬೆಲ್ ಪ್ರಶಸ್ತಿ ಪುರಷ್ಕೃತ ಅಮರ್ತ್ಯ ಸೇನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಮೊದಲಿನಿಂದಲೂ ಇದು ಬಹುತ್ವದ ರಾಷ್ಟ್ರ. ಎಲ್ಲರ ರಾಷ್ಟ್ರ. ಬರೀ ಹಿಂದೂಗಳ ರಾಷ್ಟ್ರವಾಗಲು ಸಾಧ್ಯವಾಗಿಲ್ಲ. ಇಲ್ಲಿ ಎಲ್ಲ ಜಾತಿ, ಧರ್ಮದವರು, ಎಲ್ಲ ಭಾಷೆಯವರು ಇದ್ದಾರೆ. ಬಹುತ್ವ ಸಂಸ್ಕೃತಿ ಇರುವ ರಾಷ್ಟ್ರ. ಅಮರ್ತ್ಯ ಸೇನ್ ಹೇಳಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ ಬೇಕು ಅನ್ನೋರು ಹೈಕಮಾಂಡ್ ಬಳಿ ಮಾತನಾಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್