ಮೈಸೂರು: ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿಗೆ ಬಾಡಿಗೆ ಮನೆಯ ಮಾಲೀಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಜೆಎಸ್ಎಸ್ ಬಡಾವಣೆಯಲ್ಲಿ ನಡೆದಿದೆ. ಈ ಸಂಬಂಧ ಎನ್.ಆರ್.ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
''ತಾನು ನಗರದ ಮೆಡಿಕಲ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಜೆಎಸ್ಎಸ್ ನಗರದ ಅಮಾನುಲ್ಲಾ ಖಾನ್ ಎಂಬಾತ ಯಾರು ಇಲ್ಲದ ಸಮಯದಲ್ಲಿ ತನ್ನ ರೂಮಿಗೆ ಬಂದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಕೇರಳ ಮೂಲದ ಯುವತಿ, ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ನೀಡಿದ ದೂರಿನನ್ವಯ ಅಮಾನುಲ್ಲಾ ಖಾನ್ನನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ'' ಮೈಸೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ. ಮುತ್ತುರಾಜ್ ಅವರು ಮಾಹಿತಿ ನೀಡಿದ್ದಾರೆ.
ಯುವತಿಯ ದೂರೇನು?: ''ಕಳೆದ ಜೂನ್ ತಿಂಗಳಿನಿಂದ ಆರೋಪಿ ಅಮಾನುಲ್ಲಾ ಖಾನ್ ಮನೆಯಲ್ಲಿ ತಾನು ಕೊಠಡಿ ಬಾಡಿಗೆ ಪಡೆದು ವಾಸವಿರುವೆ. ಆದರೆ, ಈ ನಡುವೆ ಯಾರು ಇಲ್ಲದ ವೇಳೆ ಆರೋಪಿಯು ತನ್ನ ಕೊಠಡಿಗೆ ಬಂದು ಬಲವಂತವಾಗಿ ತನ್ನ ಕೈ ಹಿಡಿದು ಎಳೆದು, ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ನನ್ನ ಜೊತೆ ಸಹಾಕರಿಸಬೇಕು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಭಯದಿಂದ ಆತನಿಂದ ತಪ್ಪಿಸಿಕೊಂಡು ಹೊರಬಂದು ತನ್ನ ಸ್ನೇಹಿತನಿಗೆ ಮಾಹಿತಿ ನೀಡಿದೆ ಎಂದು ಯುವತಿಯು ತನ್ನ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡು ಮನೆಯ ಮಾಲೀಕನನ್ನು ಬಂಧಿಸಲಾಗಿದೆ'' ಎಂದು ಮುತ್ತುರಾಜ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಾಸ್‌ಪೋರ್ಟ್ ವೆರಿಫಿಕೇಷನ್ ವೇಳೆ ಯುವತಿಗೆ ಕಿರುಕುಳ ಆರೋಪ: ಕಾನ್ಸ್‌ಟೇಬಲ್ ಅಮಾನತು - CONSTABLE SUSPENDED