ರಾಯಚೂರು : ಸಂಕ್ರಾಂತಿ ಹಬ್ಬದ ಆಗಮನದ ಹಿನ್ನೆಲೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಆರಾಧಕರು ಅಯ್ಯಪ್ಪ ಸ್ವಾಮಿ ಮಾಲೆಯನ್ನು ಧರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಇಂದು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಜಿಲ್ಲೆಯ ಕವಿತಾಳ ಪಟ್ಟಣದ ಮುಖಂಡ ಬಿ. ಎ ಕರೀಂ ಸಾಬ್ ಅವರು ತಮ್ಮ ಮನೆಯಲ್ಲಿ ಮಾಲಾಧಾರಿಗಳಿಗೆ ಭೋಜನ ವ್ಯವಸ್ಥೆ ಮಾಡುವ ಜೊತೆಗೆ ಕುಟುಂಬಸ್ಥರು ಭೋಜನವನ್ನ ಬಡಿಸಿದರು.
ಕವಿತಾಳ ಪಟ್ಟಣ ಹಾಗೂ ಪಾಮನಕಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ 42 ಮಾಲಾಧಾರಿಗಳು ಭೋಜನ ಸ್ವೀಕರಿಸಿದರು. ಕರೀಂ ಸಾಬ್ ಮೂರನೇ (ವರ್ಷ) ಬಾರಿಗೆ ಮಾಲಾಧಾರಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದಾರೆ.
ಈ ಬಗ್ಗೆ ಕರೀಂ ಸಾಬ್ ಅವರು ಮಾತನಾಡಿ, 'ನಮಗೆ ಚೆನ್ನಾಗಿ ಅನ್ನಿಸುತ್ತಿದೆ. ಆದ್ದರಿಂದಲೇ ಪ್ರಸಾದ ವ್ಯವಸ್ಥೆ ಮಾಡಿಸುತ್ತಿದ್ದೇವೆ. ಮಾಲಾಧಾರಿಗಳಲ್ಲಿ ಸಮಭಾವ, ಭಾವೈಕ್ಯತೆ, ಸಹೋದರತ್ವ ಇರುವುದರಿಂದ ಪ್ರತಿವರ್ಷ ಅನ್ನಸಂತರ್ಪಣೆ ಮಾಡಿಸುತ್ತಿದ್ದೇವೆ. ಸ್ವಧರ್ಮದ ಪಾಲನೆ ಜೊತೆಗೆ ಅನ್ಯಧರ್ಮದವರೊಂದಿಗೆ ಸಹಬಾಳ್ವೆ, ಸಹೋದರತ್ವ, ಭಾವೈಕ್ಯತೆ ನಮ್ಮ ದೇಶಕ್ಕೆ ಬಹಳ ಮುಖ್ಯವಾಗಿದೆ' ಎಂದರು.