ಮಂಗಳೂರು: ಇಂದು "ಕುದುರೆ ಸಂರಕ್ಷಣಾ ದಿನ". ಈ ಭವ್ಯವಾದ ಪ್ರಾಣಿಗಳನ್ನು ರಕ್ಷಿಸುವ ಮತ್ತು ಕಾಳಜಿ ವಹಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಕುದುರೆಗಳನ್ನು ರಕ್ಷಿಸಲು, ಪುನರ್ವಸತಿ ಮಾಡಲು ಮತ್ತು ಪುನರ್ವಸತಿಗೆ ಮೀಸಲಾಗಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಗೌರವಿಸುವ ದಿನವಾಗಿದೆ. ಕುದುರೆಗಳನ್ನು ಸಾಕುವ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ವಿವಿಧ ಸವಾಲುಗಳು ಎದುರಾಗುತ್ತವೆ. ಕುದುರೆ ಸಂರಕ್ಷಣಾ ದಿನದಂಗವಾಗಿ ಈ ವಿಶೇಷ ವರದಿ ನೋಡಿ.
ಕರಾವಳಿಯಲ್ಲಿ ಕುದುರೆಗಳ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ. ಕುದುರೆಗಳ ಬಳಕೆ ಈ ಭಾಗದಲ್ಲಿ ತೀರಾ ಕಡಿಮೆ. ಇದರ ನಡುವೆ ಮಂಗಳೂರಿನ ಕದ್ರಿ ಪಾರ್ಕ್ ಬಳಿ ಅವಿನಂದನ್ ಎಂಬವರು ಹಾರ್ಸ್ ರೈಡ್ ಅಕಾಡೆಮಿ ಸ್ಥಾಪಿಸಿ ಕುದುರೆ ಸಾಕುವ ವಿಶೇಷ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಇದೀಗ 15 ಕುದುರೆಗಳಿವೆ. ದೇಶ ವಿದೇಶದ ಕುದುರೆಗಳ ತಳಿಗಳು ಇಲ್ಲಿವೆ. ಶ್ವಾನಗಳ ಆಕಾರದಷ್ಟು ಇರುವ ಕುದುರೆಗಳು ಸಹ ಇಲ್ಲಿವೆ.
ಕರಾವಳಿಯಲ್ಲಿ ಕುದುರೆ ಸಾಕುವುದೇ ಸವಾಲು: ಕರಾವಳಿ ಜಿಲ್ಲೆಗಳಲ್ಲಿ ಕುದುರೆ ಸಾಕುವುದೇ ದೊಡ್ಡ ಸವಾಲು. ಇಲ್ಲಿನ ಹವಾಮಾನ ಕುದುರೆ ಸಾಕಲು ಬಹಳಷ್ಟು ಸಮಸ್ಯೆಯಾಗುತ್ತದೆ. ಮಳೆಗಾಲದಲ್ಲಿ ವಿಪರೀತ ಮಳೆ ಮತ್ತು ಬೇಸಿಗೆ ಕಾಲದಲ್ಲಿ ವಿಪರೀತ ತಾಪಮಾನ ಕುದುರೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಈ ಸವಾಲುಗಳ ಮಧ್ಯೆ ಅವಿನಂದನ್ ಅವರು ಕುದುರೆಗಳನ್ನು ಜೋಪಾನ ಮಾಡುತ್ತಿದ್ದಾರೆ.
ಕಾತ್ಯಾವಾರಿ, ಮಾರ್ವಾರಿ, ರಿಟೈರ್ಡ್ ರೇಸ್ ಹಾರ್ಸ್ ಥೆರೋಬ್ರೀಡ್, ಪೋನಿಸ್ ಎಂಬ ವಿವಿಧ ತಳಿಯ ಕುದುರೆಗಳು ಇಲ್ಲಿವೆ. ಈ ಕುದುರೆಗಳನ್ನು ಅವುಗಳಿಗೆ ತಕ್ಕಂತೆ ಆರೈಕೆ ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ಹಾರ್ಸ್ ರೈಡ್ ಅಕಾಡೆಮಿಯ ಮಾಲೀಕ ಅವಿನಂದನ್ " ಸತತ 10 ವರ್ಷಗಳಿಂದ ನಡೆಸುತ್ತಾ ಬಂದಿದ್ದೇನೆ. ನನ್ನಲ್ಲಿ 15 ಕುದುರೆಗಳಿವೆ. ಬೇರೆ ಬೇರೆ ತಳಿಯ ಕುದುರೆಗಳಿವೆ. ಈ ಕುದುರೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಕಾನ್ಸೆಪ್ಟ್. ವಿಪರೀತ ಮಳೆ, ವಿಪರೀತ ಸೆಕೆ ಸವಾಲು ಇದೆ. ಕುದುರೆ ಸಾಮಾನ್ಯ ಪ್ರಾಣಿ ಅಲ್ಲ. ಇದಕ್ಕೆ ಬಲಿಷ್ಠವಾಗಲು ವ್ಯವಸ್ಥೆ ಮಾಡಬೇಕು. ಆಹಾರ ಕೊಡಬೇಕು. ಮನುಷ್ಯರಿಗಿಂತ ಅದನ್ನು ಚೆನ್ನಾಗಿ ನೋಡಬೇಕು. ಮೂರು ಹೊತ್ತು ಮಾಲೀಶ್ ಮಾಡಬೇಕು. ಗ್ರೂಮಿಂಗ್ ಆಗಬೇಕು, ಪುಡ್ ಡಯಟ್ ಆಗಬೇಕು. ಆಗ ಮಾತ್ರ ಕುದುರೆಗೆ ಗತ್ತು ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುದುರೆ ವೈದ್ಯರು ಕಡಿಮೆ. ಈ ಬಾರಿ ವಿಪರೀತ ತಾಪಮಾನದಿಂದ ಒಂದು ಕುದುರೆ ಸಾವನ್ನಪ್ಪಿತ್ತು. ಕುದುರೆಗೆ ಬರುವ ಹೊಟ್ಟನೋವಿಗೆ 24 ಗಂಟೆಯಲ್ಲಿ ಚಿಕಿತ್ಸೆ ಆಗದಿದ್ದರೆ ಸಾವನ್ನಪ್ಪುತ್ತದೆ. ಮಳೆಗಾಲದಲ್ಲಿ ಅದರ ಮೇಲೆ ಬಿದ್ದ ನೀರು ಹೋಗದಿದ್ದರೆ ಚರ್ಮಕ್ಕೆ ಹಾನಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ದಾವಣಗೆರೆ: ಕೆರೆಯಲ್ಲಿ 5 ರಿಂದ 10 ಕೆಜಿಯ 1 ಲಕ್ಷ ಮೀನುಗಳ ಮಾರಣಹೋಮ - FISH DIED