ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ: ಆರೋಪಿ ಫಯಾಜ್ ವಿರುದ್ಧ ಆಕ್ರೋಶ - NEHA MURDER CASE - NEHA MURDER CASE
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಜಾಗೃತ ಮಹಿಳಾ ವೇದಿಕೆ ನೇತೃತ್ವದಲ್ಲಿ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದರು.
Published : Apr 22, 2024, 5:48 PM IST
|Updated : Apr 23, 2024, 12:11 PM IST
ಬೆಳಗಾವಿ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯರು ಬೀದಿಗಿಳಿದಿದ್ದು, ಬೃಹತ್ ಪ್ರತಿಭಟನೆ ನಡೆಸಿದರು. ಕ್ರೂರವಾಗಿ ನೇಹಾ ಕೊಲೆಗೈದ ಆರೋಪಿ ಫಯಾಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.
ಜಾಗೃತ ಮಹಿಳಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಳಗಾವಿ ಮಾರುತಿ ಮಂದಿರದಿಂದ ಆರಂಭವಾದ ರ್ಯಾಲಿಯು ರಾಮದೇವ ಗಲ್ಲಿ, ಶನಿವಾರ ಕೂಟ, ಕಾಕತಿವ್ಹೇಸ್ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಆಗಮಿಸಿತು. ಈ ವೇಳೆ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಫಯಾಜ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಆತನ ಭಾವಚಿತ್ರವನ್ನು ಕಾಲಿನಿಂದ ತುಳಿದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಶ್ರೀಗೌರಿ, ನಮಗೆ ಒಂದು ಬಾರಿ ಪಿನ್ ಚುಚ್ಚಿದರೆ ಎಷ್ಟೊಂದು ನೋವಾಗುತ್ತದೆ. ಅಂಥಹದರಲ್ಲಿ ಹಲವು ಬಾರಿ ಚುಚ್ಚಿ ನೇಹಾಳನ್ನು ಸಾಯಿಸಿದ್ದಾನೆ. ಆಕೆಗೆ ಎಷ್ಟು ನೋವಾಗಿರಬೇಕು. ಈಗ ಚುನಾವಣೆ ಬಂದಿದೆ. ಯಾರಾದ್ರೂ ಪುಗ್ಸಟ್ಟೆ ಕೊಡುತ್ತಾರೆಂದು ವೋಟ್ ಹಾಕಬಾರದು. ನಮಗೆ ಯಾರು ರಕ್ಷಣೆ ಕೊಡುತ್ತಾರೋ ಅಂಥವರಿಗೆ ವೋಟ್ ಹಾಕಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲ: ''ಬಿಜೆಪಿ ಮುಖಂಡೆ ಲೀನಾ ಟೋಪಣ್ಣವರ ಮಾತನಾಡಿ, ಇದೊಂದು ವ್ಯವಸ್ಥಿತ ಷಡ್ಯಂತ್ರ. ದೇಶಾದ್ಯಂತ ಲಕ್ಷಾಂತರ ಮಹಿಳೆಯರನ್ನು ಮತಾಂತರ ಮಾಡಲಾಗುತ್ತಿದೆ. ಹುಬ್ಬಳ್ಳಿ ಹುಡುಗಿ ರಿಜೆಕ್ಟ್ ಮಾಡಿದ್ದಕ್ಕೆ ಕೊಂದಿದ್ದಾರೆ. ಒಪ್ಪಿದ್ದರೆ ಮಾಡಿದ್ದರೆ ಮತಾಂತರ ಮಾಡುತ್ತಿದ್ದರು. ಎಲ್ಲಾ ಹಿಂದೂ ಮಹಿಳೆಯರು ಇಂತವರಿಂದ ದೂರ ಇರಬೇಕು. ಈ ಕಾಂಗ್ರೆಸ್ ಸರ್ಕಾರದ ಮೇಲೆ ನಮಗೆ ಯಾವುದೇ ನಂಬಿಕೆ ಇಲ್ಲ ಎಂದು'' ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಜಿಹಾದಿಗಳು ಹೆಚ್ಚಳ: ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ. ನಯನಾ ಭಸ್ಮೆ ಮಾತನಾಡಿ, ಇದೊಂದು ಅಮಾನವೀಯ ಕೃತ್ಯ. ಯಾವುದೇ ಪ್ರೀತಿ, ಪ್ರೇಮ ಅಲ್ಲ. ವ್ಯವಸ್ಥಿತವಾಗಿ ತರಬೇತಿ ಕೊಟ್ಟು ಈ ರೀತಿ ಹತ್ಯೆ ಮಾಡಲಾಗಿದೆ. ಹಾಗಾಗಿ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದರು.
ರಾಜೇಶ್ವರಿ ಒಡೆಯರ್ ಮಾತನಾಡಿ, ನಿಮ್ಮ ಮನೆ ಮಗನಿಗೆ ಮತ ನೀಡುವಂತೆ ಕೇಳುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಎಲ್ಲಿ ಹೋಗಿದ್ದಾರೆ. ಘಟನೆ ನಡೆದ ಮೂರನೇ ದಿನ ನೇಹಾ ಅವರ ಮನೆಗೆ ಹೋಗಿದ್ದಾರೆ. ಹಿಂದೆ ನಮ್ಮ ಅಜ್ಜ, ಅಜ್ಜಿ ಮೊಘಲರ ಆಡಳಿತದ ಬಗ್ಗೆ ನಮಗೆ ಹೇಳುತ್ತಿದ್ದರು. ಆದರೆ, ಈಗ ನಾವು ಇದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಯುಪಿ ಸಿಎಂ ಯೋಗಿ ಆಡಳಿತದಂತಹ ಸರ್ಕಾರ ಕರ್ನಾಟಕದಲ್ಲಿ ತರಬೇಕು ಎಂದು ಆಗ್ರಹಿಸಿದರು.
ಸಿದ್ದನಕೊಳ್ಳ ಮಠದ ಗಂಗಾಧರ ಸ್ವಾಮೀಜಿ, ತೇಜಪ್ರತಿಬಿಂಬ ಪೀಠದ ಹರಿಗುರು ಮಹಾರಾಜ, ಬಾಪಟಗಲ್ಲಿ ನಾಗನಾಥ ಸ್ವಾಮೀಜಿ, ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ ಸೇರಿ ಮಹಿಳೆಯರು, ವಿದ್ಯಾರ್ಥಿನಿಯರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.