ದಾವಣಗೆರೆ: ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಮಾಡುತ್ತಿರುವ ಬೆನ್ನಲ್ಲೇ ದಾವಣಗೆರೆಯಲ್ಲಿ ಇಂದು ಅಹಿಂದ ನಾಯಕರು ಬಿಜೆಪಿ-ಜೆಡಿಎಸ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನೆಯಲ್ಲಿ ಸಾವಿರಾರು ಜನ ಸೇರಿದ್ದರು. ಬಿಜೆಪಿ-ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿದ್ರು. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರ ತೇಜೋವಧೆ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಬಿಜೆಪಿ, ಜೆಡಿಎಸ್ ನಾಯಕರು ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದನ್ನು ಖಂಡಿಸಿದರು. ರಾಜ್ಯಪಾಲರು ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆ ಜಯದೇವ ವೃತ್ತ, ಮಹಾನಗರ ಪಾಲಿಕೆ, ರೇಣುಕಾಮಂದಿರ, ಅರುಣ ವೃತ್ತ, ಕೋರ್ಟ್ ವೃತ್ತ ಮುಖಾಂತರ ಸಾಗಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಅಂತ್ಯಗೊಂಡಿತು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಭಾಗಿಯಾಗಿದ್ದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, "ಸಿಎಂ ಸಿದ್ದರಾಮಯ್ಯರನ್ನು ಮುಟ್ಟಿದ್ರೆ ಜನ ಬೀದಿಗಿಳಿಯಲ್ಲಿದ್ದಾರೆ. ಬಿಜೆಪಿಯವರದ್ದು ಹೊಚ್ಚೆಕಿಚ್ಚಿನ, ಬೂಟಾಟಿಕೆಯ ಪಾದಯಾತ್ರೆ. ಸಿಎಂ ಬೆನ್ನಿಗೆ 7 ಕೋಟಿ ಜನ ಇದ್ದಾರೆ" ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ನೀಡಿರುವ ನಿವೇಶನಗಳನ್ನು ವಾಪಸ್ ಪಡೆಯಿರಿ: ಮುಡಾಗೆ ಟಿ.ಜೆ.ಅಬ್ರಹಾಂ ಮನವಿ - T J Abraham