ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಅರಣ್ಯಕ್ಕೆ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ.
ಕಳೆದ ವಾರ ಚಾರ್ಮಾಡಿ ಘಾಟಿಯ ಬಿದಿರುತಳ ತಪ್ಪಲಿನ ಕಾಡಿನಲ್ಲಿ ಕಾಳ್ಗಿಚ್ಚಿಗೆ ಅರಣ್ಯ ಹಾಗೂ ಪ್ರಾಣಿ ಸಂಕುಲ ನಾಶವಾಗಿತ್ತು. ಕಳೆದ ರಾತ್ರಿ ಮತ್ತೆ ಚಾರ್ಮಾಡಿ ತಪ್ಪಲಿನ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ನಾಶವಾಗಿದೆ.
ಬೆಂಕಿಯ ಕೆನ್ನಾಲಿಗೆ 10 ಕಿ. ಮೀ ನಷ್ಟು ದೂರಕ್ಕೆ ವ್ಯಾಪಿಸಿದ್ದರಿಂದ ಗುಡ್ಡದ ಮೇಲೆರಿ ಬೆಂಕಿ ನಂದಿಸಲಾಗದೇ ಸ್ಥಳೀಯರು ಪರದಾಡಿದರು. ಬೆಂಕಿ ಹೊತ್ತಿಕೊಂಡು ಎರಡು ಗಂಟೆ ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ತಡವಾಗಿ ಸ್ಥಳಕ್ಕೆ ಬಂದ ಸಿಬ್ಬಂದಿ ಅರಣ್ಯದಲ್ಲಿ ವ್ಯಾಪಿಸಿದ್ದ ಬೆಂಕಿ ನಂದಿಸಲು ಪರದಾಡಿದರು. ಮಲ್ಲೇಶ್, ರಂಜಿತ್, ಮುತ್ತಪ್ಪ, ಅಶೋಕ್, ಮೋಹನ್‌ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಚಾರ್ಮಾಡಿ ಘಾಟ್ ಮುಗಿಲೆತ್ತರದ ಬೆಟ್ಟಗುಡ್ಡಗಳಿಂದ ಕೂಡಿರೋ ಬೃಹತ್ ಕಾಡು. ಸಾವಿರಾರು ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನ. ಅಪರೂಪದ ಸಸ್ಯ ಸಂಪತ್ತಿನ ವನರಾಶಿ. ಇಲ್ಲಿನ ಎತ್ತರದ ಪ್ರದೇಶದ ಕಾಡಿಗೆ ಬೆಂಕಿ ಬಿದ್ದರೆ ಬೆಂಕಿ ನಂದಿಸುವುದು ಕಷ್ಟಸಾಧ್ಯ. ಎತ್ತರದ ಪ್ರದೇಶಕ್ಕೆ ಅಗ್ನಿಶಾಮಕದ ಗಾಡಿ, ಸಿಬ್ಬಂದಿ ಹೋಗೋದು ಕಷ್ಟ. ಅರಣ್ಯ ಅಧಿಕಾರಿಗಳು ಕೈಯಲ್ಲಿ ಸೊಪ್ಪು ಹಿಡಿದೇ ಬೆಂಕಿ ನಂದಿಸಬೇಕಿದೆ.
ಇದನ್ನೂ ಓದಿ : ಹೆಚ್ಚುತ್ತಿರುವ ತಾಪಮಾನ: 24 ಗಂಟೆಯಲ್ಲಿ ಒಡಿಶಾದಲ್ಲಿ 42 ಕಾಳ್ಗಿಚ್ಚಿನ ಘಟನೆಗಳು ವರದಿ - FOREST FIRES SPREAD IN ODISHA