ಕೊಪ್ಪಳ : ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ವಿಶೇಷಚೇತನ ಹೆಣ್ಣುಮಕ್ಕಳಿಗೆ ಮುತ್ತೈದೆ ಭಾಗ್ಯ ನೀಡಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಮಠ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಚೇತನರ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವರು ಕರುಣಿಸಿದ ದೇಹದ ಯಾವುದೋ ಒಂದು ಅಂಗವೈಕಲ್ಯಯಾಗಿದೆ ಎಂದು ಪರಿತಪಿಸಬಾರದು. ಅದು ಅಂಗವಿಕಲತೆಯೇ ಹೊರತು ಬದುಕಿನ ವಿಕಲತೆಯಲ್ಲ. ಬದುಕು ಬವಣೆಗಳ ಗೂಡಾಗದೆ ಭರವಸೆಯ ಬೆಳಕಾಗಬೇಕು. ಅಂಗವಿಕಲತೆಯು ಮನೋವಿಕಲತೆಗೆ ದಾರಿ ಮಾಡಿಕೊಡಬಾರದು. ನಾನು ಸೃಷ್ಟಿಸಿ ಸೃಜಿಸಿದ ಬದುಕನ್ನು ಕಂಡು ಭಗವಂತನೇ ಮೆಚ್ಚಿ, ನೀನು ಸೃಷ್ಟಿಸಿಕೊಂಡ ಬದುಕಿನ ಮುಂದೆ ನನ್ನದೇನು ಇಲ್ಲ ಅನ್ನುವ ಹಾಗೆ ಬದುಕಿ ಜಗತ್ತಿಗೆ ಮಾದರಿಯಾಗುವಂತೆ ವಿಶೇಷಚೇತನರು ಬದುಕಬೇಕು ಎನ್ನುವ ಆಶಯದಿಂದ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದೇವೆ ಎಂದರು.
ಸುಖ-ದುಃಖ ಸಮನಾಗಿ ಸ್ವೀಕರಿಸಿ: ದಾಂಪತ್ಯದ ಬದುಕಿನಲ್ಲಿ ಎಲ್ಲವೂ ಸುಖವಾಗಿರುವುದಿಲ್ಲ. ಸುಖ ಹಾಗೂ ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಯಾರೂ ಅಂಗವಿಕಲತೆಯನ್ನು ಬಂಡವಾಳ ಮಾಡಿಕೊಳ್ಳಬೇಡಿ. ಇದನ್ನು ಶಕ್ತಿಯಾಗಿ ಬದಲಿಸಿಕೊಳ್ಳಿ. ಕಣ್ಣಿಲ್ಲದಿದ್ದರೂ ಹೃದಯದ ಕಣ್ಣು ತೆರೆದು ನೋಡಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಘನಶ್ಯಾಮ್ ಬಾಂಡಗೆ ಹೇಳಿದರು. ವಿಶೇಷಚೇತನ ಮಕ್ಕಳು ಹಾಗೂ ಪಾಲಕರು ಅನುಭವಿಸುವ ನೋವು ಕುರಿತು ಮಾತನಾಡುವಾಗ ಅವರು ಕಣ್ಣೀರಾದರು. ಉಮ್ಮಳಿಸಿ ಬಂದ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತರು. ಇದರಿಂದ ಅಲ್ಲಿ ನೆರೆದಿದ್ದವರ ಕಣ್ಣಲ್ಲಿ ನೀರುಬಂತು.
ಸ್ವಾವಲಂಬಿ ಬದುಕಿಗೆ ನೆರವು : ಜೀವನ ಸಂಗಾತಿ ಜೊತೆಗೆ ಜೀವನೋಪಾಯ ಎನ್ನುವ ಘೋಷವಾಕ್ಯದಡಿ ಈ ಬಾರಿಯ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ನವಬದುಕಿಗೆ ಕಾಲಿಟ್ಟ ದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಮಠವು ಜೀವನೋಪಾಯಕ್ಕೆ ಒಂದು ಝರಾಕ್ಸ್ ಯಂತ್ರ, ಸಣ್ಣ ಅಂಗಡಿ ಉಡುಗೊರೆಯಾಗಿ ನೀಡುವ ಮೂಲಕ ಸ್ವಾವಲಂಬಿ ಬದುಕಿಗೂ ಮಠ ನೆರವಾಗಿದೆ.
ಸಾಮೂಹಿಕ ವಿವಾಹದ ಮೂಲಕ ಈ ಬಾರಿಯ ಗವಿಮಠದ ಜಾತ್ರೆಯ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಜ. 27 ರಂದು ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ಜಾತ್ರೆಯ ಅಂಗವಾಗಿ ಪ್ರತಿವರ್ಷ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಯಲ್ಲಿ ಜನಜಾಗೃತಿ ಕಾರ್ಯ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ : ಹಾಸನ: ನವ ಜೀವನಕ್ಕೆ ಕಾಲಿಟ್ಟ ವಿಶೇಷಚೇತನ ಜೋಡಿ