ಹಾವೇರಿ: ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹಾನಗಲ್ ತಾಲೂಕಿನ ಮಾರಂಬೀಡ ಮೊರಾರ್ಜಿ ವಸತಿ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿಗಳು ಓದಲು, ಸ್ನಾನ ಮಾಡಲು, ಮಲಗಲು ಬೇಕಾಗಿರುವಂತಹ ಮೂಲಭೂತ ಅಗತ್ಯಗಳೇ ಇಲ್ಲದೆ, ಮಕ್ಕಳು ಪ್ರತಿಯೊಂದಕ್ಕೂ ಪರದಾಡುವಂತಾಗಿದೆ.
ವಸತಿನಿಲಯದಲ್ಲಿ ಸರಿಯಾದ ಬೆಳಕಿಲ್ಲದೆ ವಿದ್ಯಾರ್ಥಿಗಳು, ಒಂದು ಕೊಠಡಿಗೆ ಅಳವಡಿಸಿರುವ ಟ್ಯೂಬ್ಲೈಟ್ ಅಡಿಯಲ್ಲಿ ಓದುವಂತಾಗಿದೆ. ಇನ್ನು ಫ್ಯಾನ್‌ಗಳಂತೂ ರೆಕ್ಕೆ ಮುರಿದಿವೆ. ಮಕ್ಕಳು ಮಲಗಲು ನೀಡಿದ ಸುಸಜ್ಜಿತ ಹಾಸಿಗೆಗಳು ಮಳೆನೀರಿನಿಂದ ಹಾಳಾಗಿವೆ. ಇನ್ನು ವಸತಿನಿಲಯದಲ್ಲಿ ಮಕ್ಕಳಿಗೆ ಸ್ನಾನ ಮಾಡಲು ದಿನನಿತ್ಯದ ಕರ್ಮಾದಿಗಳನ್ನು ಮುಗಿಸಿಕೊಳ್ಳಲು ಸಮರ್ಪಕ ನೀರಿನ ವ್ಯವಸ್ಥೆಯೂ ಇಲ್ಲ. ಕುಡಿಯುವ ನೀರಂತೂ ಶಾಲೆಯ ಕ್ಯಾಂಪಸ್‌ನಲ್ಲಿಯೇ ಇಲ್ಲ. ಇಲ್ಲಿಯ ಮಕ್ಕಳು ಫಿಲ್ಟರ್ ನೀರಿನ ಬದಲು ಪಕ್ಕದ ಮಠದಲ್ಲಿನ ಕೊಳವೆಬಾವಿಯಿಂದ ಬರುವ ನೀರು ಕುಡಿಯುವ ಸ್ಥಿತಿ ಇದೆ.
ಇನ್ನು ಮಲಗುವ ಕೊಠಡಿ ಕಿಟಕಿಯ ಗ್ಲಾಸ್‌ಗಳು ಒಡೆದು ಹೋಗಿದ್ದು, ಸೊಳ್ಳೆಗಳ ಕಾಟ ಹೇಳತೀರದು. ಈ ಕೊಠಡಿಗಳಲ್ಲಿರುವ ಸ್ವಿಚ್ ಬೋರ್ಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಿದ್ಯಾರ್ಥಿಗಳು ರಾತ್ರಿಯಾದರೆ ಸಾಕು ಯಾವಾಗ ಬೆಳಗ್ಗೆಯಾಗುತ್ತೋ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯದಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳು ವಾಸಿಸುತ್ತಿದ್ದು, ಪಾರಿವಾಳಗಳ ಹಿಕ್ಕೆ, ಮೂತ್ರವಾಸನೆ ವಿದ್ಯಾರ್ಥಿಗಳಿಗೆ ಹಿಂಸೆ. ಈ ಕುರಿತು ವಸತಿನಿಲಯ ವಾರ್ಡನ್ ಮತ್ತು ಶಿಕ್ಷಕರಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
![Marambida Morarji Residential School of Haveri, deprived of basic facilities](https://etvbharatimages.akamaized.net/etvbharat/prod-images/17-08-2024/22225800_thumbnailmeg.jpg)
ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದು. ವಿದ್ಯಾರ್ಥಿಗಳ ಸ್ನಾನಕ್ಕೆ ಬಿಸಿನೀರಿನ ಸೌಲಭ್ಯ ಇಲ್ಲದಾಗಿ ಹಲವು ತಿಂಗಳುಗಳೇ ಕಳೆದಿವೆ. ವಿಪರ್ಯಾಸವೆಂದರೆ ವಿದ್ಯಾರ್ಥಿನಿಯರಿಗೆ ಸಖಿಕಿಟ್ ಬರದೆ ಎರಡು ತಿಂಗಳಾಗಿವೆ. ವಸತಿ ನಿಲಯದ ರೇಷನ್ ಸಹ ಸಮರ್ಪಕವಾಗಿದರದ ದಿನಗಳನ್ನು ಇಲ್ಲಿಯ ವಿದ್ಯಾರ್ಥಿಗಳು ಕಳೆದಿದ್ದಾರೆ. ವಸತಿ ನಿಲಯದಲ್ಲಿ ಪ್ರತಿನಿತ್ಯ ಒಂದಿಲ್ಲಾಂದ್ರೆ ಇಬ್ಬರು ಮಕ್ಕಳು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಇನ್ನು ಶಾಲಾ ಸಮುಚ್ಚಯಕ್ಕೆ ಸರಿಯಾದ ಭದ್ರತೆ ಇಲ್ಲ. ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ವಸತಿನಿಲಯಕ್ಕೆ ಬರುವ ಹೋಗುವವರ ಬಗ್ಗೆ ಮಾಹಿತಿ ದಾಖಲಾತಿಯೂ ಇಲ್ಲ. ಶಾಲೆಗೆ ನಾಲ್ಕು ಸಿಸಿಟಿವಿ ಕ್ಯಾಮರಾಗಳಿದ್ದು ಅವು ಇದ್ದೂ ಇಲ್ಲದಂತಿವೆ. ಒಟ್ಟಾರೆಯಾಗಿ ಶಾಲೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ.
ಈ ಕುರಿತು ಶಾಲಾ ಮುಖ್ಯಶಿಕ್ಷಕ ಬಸವರಾಜ್ ಮತ್ತು ಹಾಸ್ಟೆಲ್ ವಾರ್ಡನ್ ಅವರನ್ನು ಕೇಳಿದಾಗ, "ಶಾಲಾ ಸಮುಚ್ಚಯ ಹಳೇಯದು ಇಲ್ಲಿನ ಅವ್ಯವಸ್ಥೆ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ರಿಪೇರಿ ಮಾಡಿಸುವ ಭರವಸೆ ನೀಡಿದ್ದಾರೆ." ಎನ್ನುತ್ತಾರೆ.
ರಾಜ್ಯ ಸರ್ಕಾರ ನಡೆಸುವ ಮೊರಾರ್ಜಿ ವಸತಿ ಶಾಲೆಗಳು ಮಾದರಿ ಶಾಲೆಗಳಾಗಿವೆ. ಆದರೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾರಂಬೀಡ ಮೊರಾರ್ಜಿ ವಸತಿ ಶಾಲೆ ಹಲವು ಇಲ್ಲಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಈ ರೀತಿಯ ಶಾಲೆಯಲ್ಲಿ ಓದಲು ನಮ್ಮ ಮಕ್ಕಳು ಇಷ್ಟು ಕಷ್ಟಪಡಬೇಕಾಗಿತ್ತಾ? ಎನ್ನುವುದು ಪೋಷಕರ ಬೇಸರ.
![Marambida Morarji Residential School of Haveri, deprived of basic facilities](https://etvbharatimages.akamaized.net/etvbharat/prod-images/17-08-2024/22225800_thumbnalmeg.jpg)
ಬಡ ಮತ್ತು ಪ್ರತಿಭಾವಂತ ಮಕ್ಕಳಿಗಾಗಿ ನವೋದಯ, ಮೊರಾರ್ಜಿ, ಸೈನಿಕ ಶಾಲೆ ಸೇರಿದಂತೆ ಹಲವು ವಸತಿ ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ. ಅದರಲ್ಲಿ ಓದುವುದೆಂದರೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠೆ. ಅದಕ್ಕಾಗಿ ನಮ್ಮ ಮಕ್ಕಳನ್ನು ಹಲವು ನುರಿತ ಶಿಕ್ಷಕರಿಂದ ಮನೆಪಾಠ ಟ್ಯೂಷನ್ ಕೊಡಿಸಿ ಪರೀಕ್ಷೆಗಳನ್ನು ಬರೆಸುತ್ತೇವೆ. ನಮ್ಮ ಮಕ್ಕಳು ಅಂತಹ ಶಾಲೆಗಳಲ್ಲಿ ಓದಿ ಉನ್ನತಸ್ಥಾನ ಪಡೆಯುವ ಕನಸು ಕಾಣುತ್ತೇವೆ. ಆದರೆ ಮಾರಂಬೀಡ ಮೊರಾರ್ಜಿ ವಸತಿ ಶಾಲೆಯ ಸ್ಥಿತಿ ನೋಡಿದರೆ ನಮ್ಮ ಶ್ರಮ ವ್ಯರ್ಥ ಎನಿಸುತ್ತದೆ ಎನ್ನುತ್ತಾರೆ ಪೋಷಕರು.
ಇದನ್ನೂ ಓದಿ: ರಾಯಚೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿ 46 ವಿದ್ಯಾರ್ಥಿಗಳು ಅಸ್ವಸ್ಥ - 46 students fall ill