ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಬಿರುಸಿನ ಪ್ರಚಾರ ನಡೆಸುತ್ತಿದ್ದು ಗೆಲುವಿನ ವಿಶ್ವಾಸದಲ್ಲಿದ್ದಾರೆ. "ನನಗೊಂದು ಅವಕಾಶ ಕೊಡಿ" ಎಂದು ಮತಯಾಚಿಸುತ್ತಿರುವ ಅವರು, ಗ್ಯಾರಂಟಿಗಳ ಬಲದೊಂದಿಗೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ತವಕದಲ್ಲಿದ್ದಾರೆ. 'ಈಟಿವಿ ಭಾರತ್' ಜೊತೆ ಮಾತನಾಡಿದ ಖಾನ್, ತಮ್ಮ ಚುನಾವಣಾ ಅಜೆಂಡಾ, ಮುನ್ನೋಟದ ಬಗ್ಗೆ ತಿಳಿಸಿದರು.
ಜನ ನಿಮಗೇಕೆ ಮತ ಹಾಕಬೇಕು?: "ಪಿ.ಸಿ.ಮೋಹನ್ ಮೂರು ಬಾರಿ ಸಂಸದರಾಗಿದ್ದಾರೆ. ಅವರು ಕ್ಷೇತ್ರ, ಬೆಂಗಳೂರು ಅಭಿವೃದ್ಧಿಗಾಗಿ ಏನು ಕೆಲಸ ಮಾಡಿದ್ದಾರೆ?. ಅದರ ರಿಪೋರ್ಟ್ ಕಾರ್ಡ್ ಕೊಡಲಿ. ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ರಾಜ್ಯದಲ್ಲಿರುವ ಬರದ ಬಗ್ಗೆ ಏನಾದರೂ ಮಾತನಾಡಿದ್ದಾರಾ?. ಸಂಸತ್ತಿನಲ್ಲಾಗಲಿ, ಹೊರಗಡೆಯಾಗಲಿ ಮಾತನಾಡಿದ್ದಾರಾ?. ಮೂರು ಬಾರಿ ಅವರಿಗೆ ಅವಕಾಶ ನೀಡಿದ್ದೀರಿ. ನಾನು ಯುವಕ, ನನಗೂ ಒಮ್ಮೆ ಅವಕಾಶ ಕೊಡಿ. ನನಗೆ ನನ್ನದೇ ಆದ ವಿಷನ್ ಇದೆ. ಕರ್ನಾಟಕದ ಪರವಾಗಿ ನಾನು ಸಂಸತ್ ಹೊರಗಡೆ ಹಾಗು ಒಳಗಡೆ ಹೋರಾಟ ಮಾಡುತ್ತೇನೆ".
ನಿಮ್ಮ ಅಜೆಂಡಾ ಏನು?: "ಬೆಂಗಳೂರಲ್ಲಿ ನೀರಿನ ಸಮಸ್ಯೆ ಇದೆ. ಅಭಿವೃದ್ಧಿ ಕಾಮಗಾರಿಗಳಿಂದ ಹಸಿರು ನಾಶವಾಗುತ್ತಿದೆ. ಕೆರೆಗಳು ಒತ್ತುವರಿಯಾಗುತ್ತಿವೆ. ಅಂತರ್ಜಲ ಬತ್ತಿ ಹೋಗುತ್ತಿದೆ. ಇದೊಂದು ಜನಾಂದೋಲನವಾಗಬೇಕು. ಬೆಂಗಳೂರು ಸುಸ್ಥಿತ ಅಭಿವೃದ್ಧಿ ಕಾಣಬೇಕು. ಪರಿಸರಕ್ಕೆ ನನ್ನ ಹೆಚ್ಚಿನ ಆದ್ಯತೆ. ನಾನು ಸಂಸದನಾದರೆ ಎಲ್ಲ ಕುಟುಂಬ ಸಸಿ ನಡುವಂತೆ ಮಾಡುತ್ತೇನೆ. ಇದರಿಂದ 40 ಲಕ್ಷ ಮರಗಳು ಬೆಂಗಳೂರಲ್ಲಿ ಬರುತ್ತವೆ. ಶಿಕ್ಷಣ ಹಾಗೂ ಆರೋಗ್ಯ ನನ್ನ ಆದ್ಯತೆಯ ಅಜೆಂಡಾ. ಅದರ ಜೊತೆಗೆ ಉದ್ಯೋಗಾವಕಾಶ ಕಲ್ಪಿಸುವುದು ನನ್ನ ಮೊದಲ ಆದ್ಯತೆ."
ಗ್ಯಾರಂಟಿಗಳು ಮತವಾಗಿ ಪರಿವರ್ತನೆಯಾಗುವ ವಿಶ್ವಾಸ ಇದೆಯಾ?: "ಖಂಡಿತ. ನನ್ನ ಮನೆ ಕೆಲಸದವರು ಇಂದಿರಾ ಕ್ಯಾಂಟಿನ್ನಲ್ಲಿ ತಿಂಡಿ ತಿಂದು ಬಳಿಕ ಕೆಲಸಕ್ಕೆ ಉಚಿತವಾಗಿ ಬಸ್ನಲ್ಲಿ ಬರುತ್ತಾರೆ. ಮನೆಯಲ್ಲಿ ಜೀರೋ ಕರೆಂಟ್ ಬಿಲ್. ಖಾತೆಗೆ 2000 ರೂ. ಜಮೆ ಆಗುತ್ತಿದೆ. ಈ ತರ ಯಾವುದಾದರೂ ಸರ್ಕಾರ ಮಾಡಿದೆಯಾ?. ನಮ್ಮ ಗ್ಯಾರಂಟಿ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿದೆ."
ಮೂವರು ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ನಿಮಗೆ ಮಾತ್ರ ಟಿಕೆಟ್ ನೀಡಲಾಗಿದೆ ಏನಂತೀರಿ?: "ನಾನೊಬ್ಬ ಶಿಕ್ಷಣ ತಜ್ಞ. ನನ್ನ ಶಾಲೆಯಲ್ಲಿ 4 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ಧರ್ಮ ನೋಡಿಲ್ಲ. ಎಲ್ಲಾ ಧರ್ಮದವರು ನನ್ನ ಶಾಲೆಯಲ್ಲಿ ಓದಿದ್ದಾರೆ. ಈ ಧರ್ಮ ಅಂತ ಮಾಡಿರುವುದು ಕೆಲವು ರಾಜಕೀಯ ಪಕ್ಷಗಳು. ನಮ್ಮ ದೇಶ ನಡೆಯುವುದು ಜಾತ್ಯತೀತತೆಯ ಆಧಾರದಲ್ಲಿ. ಉತ್ತಮ ಅಭ್ಯರ್ಥಿ ಆಯ್ಕೆಯಾಗಬೇಕು. ಧರ್ಮ, ಜಾತಿ, ಲಿಂಗ ಮುಖ್ಯವಲ್ಲ. ದೇಶ ಇದರ ಆಧಾರದಲ್ಲೇ ಮುಂದೆ ಹೋಗಬೇಕು."
ನಾಲ್ಕನೇ ಬಾರಿ ಕಣದಲ್ಲಿರುವ ಹಾಲಿ ಸಂಸದ ಪಿ.ಸಿ.ಮೋಹನ್ ಗೆಲುವಿಗೆ ತಡೆಯೊಡ್ಡುವ ವಿಶ್ವಾಸ ಇದೆಯಾ?: "ನಾನು ಗ್ರೌಂಡ್ ಸಿಚ್ಯುವೇಷನ್ ನೋಡಿದ್ದೇನೆ. ನನಗೆ ವಿಶ್ವಾಸ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ಸಿಗಲಿದೆ."
ನಿಮಗೆ ನಿಮ್ಮದೇ ಕೆಲ ಶಾಸಕರು ಸಹಕಾರ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?: "ಅದು ಸುಳ್ಳು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನನ್ನ ನಾಮಪತ್ರ ಸಲ್ಲಿಕೆ ವೇಳೆ ಶಾಸಕ ಎನ್.ಎ.ಹ್ಯಾರೀಸ್ ತಾಯಿ ನಿಧನ ಹೊಂದಿದ್ದರು. ಹಾಗಾಗಿ ಅವರಿಗೆ ಬರಲು ಆಗಿಲ್ಲ. ಕೆ.ಜೆ.ಜಾರ್ಜ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಬೇಕಾಗಿತ್ತು. ಸಚಿವ ದಿನೇಶ್ ಗುಂಡೂರಾವ್ರದ್ದೂ ಅದೇ ರೀತಿ ಆಗಿತ್ತು. ಆದರೆ ಅದನ್ನೇ ತಪ್ಪಾಗಿ ಬಿಂಬಿಸಲಾಯಿತು. ಆದರೆ ಆ ಸುದ್ದಿ ಬಂದ ಬಳಿಕ ನನಗೆ ಲಾಭವೇ ಆಯಿತು. ನಾವೆಲ್ಲರೂ ಇನ್ನೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ನನಗೆ ಸಹಾಯ ಮಾಡುತ್ತಿದ್ದಾರೆ."
ಇದನ್ನೂ ಓದಿ: 25 ಸ್ಥಾನ ಗೆಲ್ಲಿಸಿದ ಕರ್ನಾಟಕಕ್ಕೆ ಒಂದೇ ಸಂಪುಟ ಸ್ಥಾನ ನೀಡಿದ್ದು ರಾಜ್ಯಕ್ಕೆ ಮಾಡಿದ ಅವಮಾನ: ತೆಲಂಗಾಣ ಸಿಎಂ - Revanta Reddy