ಬೆಂಗಳೂರು: ಮಂಗಳೂರಿನ ಸೇಂಟ್ ಜೆರೋಸಾ ಪ್ರೌಢ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುವಾಗ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂದು ಪ್ರತಿಭಟಿಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಡಾ. ವೈ.ಭರತ್ ಶೆಟ್ಟಿ ಸೇರಿ ಐವರು ಮಂದಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕಾಮತ್, ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹಾಗೂ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್ವೆಲ್, ಸಂದೀಪ್ ಮತ್ತು ಭರತ್ ಕುಮಾರ್ ಅವರಿಗೆ ನ್ಯಾಯಾಧೀರು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಮಂಗಳೂರಿನ ದಕ್ಷಿಣ ಠಾಣೆಯ ಪೊಲೀಸರು ಆರೋಪಿಗಳಿಂದ ಒಂದು ಲಕ್ಷ ಮೌಲ್ಯದ ಬಾಂಡ್ ಮತ್ತು ಭದ್ರತೆ ಪಡೆದು ಮಧ್ಯಂತರವಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ನಿರೀಕ್ಷಣಾ ಚಾಲ್ತಿಯಲ್ಲಿರಲಿದೆ. ಅರ್ಜಿದಾರರು ಸಾಕ್ಷ್ಯ ತಿರುಚುವುದು ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಅಪರಾಧ ಕೃತ್ಯದಲ್ಲಿ ಮತ್ತೆ ಭಾಗಿಯಾಗಬಾರದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಇದೇ ಫೆಬ್ರವರಿ 12ರಂದು ಸೇಂಟ್ ಜೆರೋಸಾ ಪ್ರೌಢಶಾಲೆಯ ಸಿಸ್ಟರ್ ಪ್ರಭಾ ಎಂಬ ಶಿಕ್ಷಕಿ ರವೀಂದ್ರನಾಥ್ ಟ್ಯಾಗೋರ್ ರಚಿಸಿರುವ ವರ್ಕ್ ಇಸ್ ವರ್ಷಿಪ್ (ಕಾಯಕವೇ ಕೈಲಾಸ) ವಿಷಯ ಬೋಧಿಸುವಾಗ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಆಡಿಯೋ ಸಂದೇಶ ವೈರಲ್ ಆಗಿತ್ತು. ಅದಕ್ಕೆ ಖಂಡಿಸಿ ಪ್ರತಿಭಟನೆ ನಡೆಸಲಾಗಿತ್ತು.
ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ ಮತ್ತು ಶರಣ್ ಪಂಪ್ವೆಲ್, ಸಂದೀಪ್ ಮತ್ತು ಭರತ್ ಕುಮಾರ್ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಾಗಿದ್ದು, ಅವರು ಶಾಲೆಯ ಮುಂದೆ ಸೇರಿ ಜನರನ್ನು ಉದ್ರೇಕಿಸಿದ್ದಾರೆ. ಶಾಲೆಯ ಮುಂದೆ ಬಿಗುವಿನ ವಾತಾವರಣ ನಿರ್ಮಾಣ ಮಾಡಿದ್ದಾರೆ. ತಮ್ಮ ಸ್ಥಾನ ಘನತೆ ಮರೆತು ಆರೋಪಿಗಳು ನಡೆದುಕೊಂಡಿದ್ದಾರೆ. ಈ ಮೂಲಕ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅನಿಲ್ ಜೆರಾಲ್ಡ್ ಲೋಬೊ ಫೆಬ್ರವರಿ 14ರಂದು ದೂರು ನೀಡಿದ್ದರು. ಈ ನಡುವೆ ಬಂಧನದ ಭೀತಿಯಲ್ಲಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆ ಪ್ರಕರಣ: ಐಎಎಸ್ ಅಧಿಕಾರಿಯಿಂದ ತನಿಖೆ ಆರಂಭ