ಮಂಗಳೂರು: ವಿದೇಶದಲ್ಲಿರುವ ಸೈಬರ್ ವಂಚಕರಿಗೆ ನೀಡಲು 86 ಸಿಮ್ಗಳನ್ನು ಸಂಗ್ರಹಿಸಿದ್ದ ಇಬ್ಬರನ್ನು ಮಂಗಳೂರು ನಗರದ ಸೆನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಿಬಿಎ ವಿದ್ಯಾರ್ಥಿ ಶಹಾದ್ ಮೊಹಮ್ಮದ್ ಶಮೀರ್ (21) ಮತ್ತು ಮೊಹಮ್ಮದ್ ಅಜೀಮ್ ಬಂಧಿತರು. ಈ ಆರೋಪಿಗಳು ಮಂಗಳೂರು ತಾಲೂಕು ಮರೋಳಿ ಗ್ರಾಮದ ಬಿಕರ್ನಕಟ್ಟೆ ಬಜ್ಜೋಡಿ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೆನ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಅವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿದಾಗ ದುಷ್ಕೃತ್ಯ ಬಯಲಾಗಿದೆ. ಯುವಕರು ಸೈಬರ್ ವಂಚಕರಿಗೆ ನೀಡುವ ಉದ್ದೇಶದಿಂದ ದೊಡ್ಡ ಸಂಖ್ಯೆಯಲ್ಲಿ ಸಿಮ್ ಕಾರ್ಡ್ಗಳನ್ನು ಪಡೆದು ವಿದೇಶಕ್ಕೆ ರವಾನಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಅವರು 86 ಸಿಮ್ ಕಾರ್ಡ್ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್ನ ಸಾಜೀದ್ ಎಂಬವರ ಸೂಚನೆಯಂತೆ ವಿದೇಶಕ್ಕೆ ಮಾರಾಟ ಮಾಡಲು ಸಿಮ್ ಕಾರ್ಡ್ ಪಡೆದುಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ Airtel ಕಂಪೆನಿಯ 86 ಸಿಮ್ ಕಾರ್ಡ್, 3 ಮೊಬೈಲ್ ಫೋನ್ ಮತ್ತು ಸಿಮ್ ಖರೀದಿ ಮತ್ತು ಸಾಗಾಟಕ್ಕೆ ಬಳಸಿದ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು 5,49,300- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.